ಬೆಂಗಳೂರಿನ ವಕೀಲರಾದ ಬಿ ಎ ಬೆಳ್ಳಿಯಪ್ಪ ಅವರನ್ನು ನೂತನ ರಾಜ್ಯ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) -1 ಹಾಗೂ ವಿಜಯಕುಮಾರ ಮಜಗೆ ಅವರನ್ನು ರಾಜ್ಯ ಸರ್ಕಾರಿ ಅಭಿಯೋಜಕರು -2 ಹುದ್ದೆಗೆ ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಿ ರಾಜ್ಯ ಸರ್ಕಾರವು ಸೋಮವಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಕೋಶದ ಕಾರ್ಯದರ್ಶಿಯಾದ ವಕೀಲ ಬಿ ಎನ್ ಜಗದೀಶ್ ಅವರನ್ನು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ, ಧಾರವಾಡದ ಎಂ ಬಿ ಗುಂಡವಾಡೆ ಅವರನ್ನು ಧಾರವಾಡ ಪೀಠದ ಹಾಗೂ ಸಿದ್ಧಲಿಂಗ ಪಂಡಿತರಾವ ಪಾಟೀಲ್ ಅವರನ್ನು ಕುಲಬುರ್ಗಿ ಪೀಠದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಲಾಗಿದೆ. ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಈ ಹಿಂದೆ ವಿ ಎಂ ಬಣಕರ್ ಮತ್ತು ಪ್ರಕಾಶ್ ಏಲಿ ಅವರು ಕ್ರಮವಾಗಿ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿದ್ದರು.
ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 23ರ ಅನ್ವಯ ಹೊಸ ನೇಮಕಾತಿಗಳನ್ನು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ (ಆಡಳಿತ-2) ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು ಸಹಿ ಮಾಡಿರುವ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಎಸ್‌ಪಿಪಿ-1 ಕಿರಣ್ ಎಸ್. ಜವಳಿ ಹಾಗೂ ಎಸ್‌ಪಿಪಿ-2 ವಿ ಎಸ್ ಹೆಗ್ಡೆ ಅವರಿಗೆ ಒಂದು ತಿಂಗಳ ನೋಟಿಸ್‌ಗೆ ಬದಲು ಒಂದು ತಿಂಗಳ ರಿಟೇನರ್ ಫೀ ಮಂಜೂರು ಮಾಡಿ, ಅವರನ್ನು ಕರ್ತವ್ಯದಿಂದ ಬಿಡಿಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.