ಸುದ್ದಿಗಳು

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯ ಬಂಧನ; 10 ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ ಬೆಳ್ತಂಗಡಿ ನ್ಯಾಯಾಲಯ

ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ ಅನೇಕ ಶವಗಳನ್ನು ಹೂಳಿದ್ದಾಗಿ ತಿಳಿಸಿದ್ದ ಬಂಧಿತ ಚಿನ್ನಯ್ಯ ಅವರನ್ನು ನ್ಯಾಯಾಧೀಶ ಟಿ ಎಚ್‌ ವಿಜಯೇಂದ್ರ ಅವರು ಎಸ್‌ಐಟಿ ಕಸ್ಟಡಿಗೆ ನೀಡಿದ್ದಾರೆ.

Bar & Bench

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂಳಿರುವುದಾಗಿ ಹೇಳಿಕೆ ನೀಡಿದ್ದ ಹಾಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಕಾರಣನಾಗಿದ್ದ ಸಾಕ್ಷಿ ದೂರುದಾರನಾದ ಸಿ ಎನ್‌ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯವು ಹತ್ತು ದಿನ ವಿಶೇಷ ತನಿಖಾ ದಳದ ವಶಕ್ಕೆ ನೀಡಿದೆ.

ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ ಅನೇಕ ಶವಗಳನ್ನು ಹೂಳಿರುವುದಾಗಿ ತಿಳಿಸಿದ್ದ ಬಂಧಿತ ಚಿನ್ನಯ್ಯನನ್ನು ಬೆಳ್ತಂಗಡಿ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಟಿ ಎಚ್‌ ವಿಜಯೇಂದ್ರ ಅವರ ಮುಂದೆ ಹಾಜರುಪಡಿಸಲಾಯಿತು.

ಬಂಧಿತ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶರು ಚಿನ್ನಯ್ಯನನ್ನು ಹತ್ತು ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಈ ಹಿದಿನಿಂದ ಹಲವು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವ ಬೆದರಿಕೆ ಒಡ್ಡಿ, ಈ ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ ಎಂದು ಚಿನ್ನಯ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಜುಲೈ 3ರಂದು ದೂರು ನೀಡಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಜುಲೈ 4ರಂದು ಬಿಎನ್‌ಎಸ್‌ ಸೆಕ್ಷನ್‌ 211(ಎ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಜುಲೈ 11ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಿನ್ನಯ್ಯ ತನ್ನ ಹೇಳಿಕೆ ದಾಖಲಿಸಿದ್ದ.

ಈ ನಡುವೆ ಚಿನ್ನಯ್ಯ ತೋರಿದ ಹಲವು ಜಾಗಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಅಗೆದು ಪರಿಶೀಲನೆ ನಡೆಸಿದ್ದರು. ಎರಡು ಕಡೆ ಅಸ್ಥಿಪಂಜರದ ಅವಶೇಷಗಳು ಸಿಕ್ಕಿದ್ದು, ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಈ ನಡುವೆ ಚಿನ್ನಯ್ಯಗೆ ಸಾಕ್ಷಿ ಸಂರಕ್ಷಣಾ ಕಾಯಿದೆ ಸಂರಕ್ಷಣೆ ಒದಗಿಸಲಾಗಿತ್ತು.