ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮವನ್ನು ಕೊಡಿಯಾಲ ಸಮೀಪದ ಗ್ರಾಮಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಫಲಾನುಭವಿಗಳೇ ಅಡ್ಡಿಪಡಿಸುತ್ತಿದ್ದು, ಕೆಲ ಫಲಾನುಭವಿಗಳು ತಮಗೆ ಹಂಚಿಕೆಯಾಗಿದ್ದ ಮನೆ, ನಿವೇಶನಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರ ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ನೆಲವಾಗಿಲು ಗ್ರಾಮದಲ್ಲಿ ನೀರು ಮತ್ತು ಗಾಳಿ ಮಲಿನವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರನ್ನು ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ರೇಣುಕಾ ಹಾಗೂ ಮತ್ತಿರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು “ಪ್ರಕರಣ ಸಂಬಂಧ ವಸ್ತುಸ್ಥಿತಿ ವರದಿ ಸಲ್ಲಿಸಲಾಗಿದೆ. ನೆಲವಾಗಿಲು ಗ್ರಾಮದ ನಿವಾಸಿಗಳನ್ನು ಸ್ಥಳಾಂತರಿಸಲು ಕೋಡಿಹಾಲ, ಹೊಸಪೇಟೆ ಗ್ರಾಮದಲ್ಲಿ 478 ನಿವೇಶನ ರಚಿಸಲಾಗಿದೆ. 452 ನಿವೇಶನ ಹಂಚಿಕೆ ಮಾಡಲಾಗಿದೆ. ಸರ್ಕಾರವು 56 ಮನೆಗಳ ನಿರ್ಮಾಣ ಮಾಡಿದ್ದು, ಅದರಲ್ಲಿ ಕೆಲವನ್ನು ಫಲಾನುಭವಿಗಳು ಬೇರೊಬ್ಬರಿಗೆ ಮಾರಾಟ ಮಾಡಿ ಹಳೆಯ ಗ್ರಾಮದಲ್ಲೇ ವಾಸವಾಗಿದ್ದಾರೆ. ಇನ್ನು ಕೆಲವು ಫಲಾನುಭವಿಗಳು ಸ್ಥಳಾಂತರಕ್ಕೆ ವಿವಿಧ ಷರತ್ತು ಹಾಗೂ ಬೇಡಿಕೆ ಇಟ್ಟಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವವರೆಗೂ ಸ್ಥಳಾಂತರಕ್ಕೆ ಒಪ್ಪುವುದಿಲ್ಲ ಎಂದಿದ್ದಾರೆ. ಜತೆಗೆ, ಪ್ರತಿಭಟನೆ ನಡೆಸುತ್ತಾ ಮನೆಗಳ ನಿರ್ಮಾಣ ಕಾರ್ಯ ನಿಲ್ಲಿಸಿದ್ದಾರೆ” ಎಂದರು.
ಅರ್ಜಿದಾರ ಪರ ವಕೀಲ ಎನ್ ಪಿ ಅಮೃತೇಶ್ ಅವರು “ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ. ಪ್ರಕರಣ ಸಂಬಂಧ ಸರ್ಕಾರ ಸಲ್ಲಿಸಿರುವ ವಸ್ತುಸ್ಥಿತಿ ವರದಿಗೆ ಆಕ್ಷೇಪಣೆ ಸಿದ್ಧವಾಗಿದೆ. ಅದನ್ನು ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಪ್ರಕರಣದಲ್ಲಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲಾಗಿದೆಯೇ ಅಥವಾ ಇಲ್ಲವೋ ಎಂಬುದನ್ನಷ್ಟೇ ನ್ಯಾಯಾಲಯ ಪರಿಶೀಲಿಸುತ್ತದೆ. ಪುನರ್ವಸತಿ ಕಲ್ಪಿಸಲಾಗಿದೆಯೇ ಎಂಬುದನ್ನು ಮಾತ್ರ ನೀವು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿ. ಉಳಿದ ವಿಚಾರಗಳನ್ನು ಪರಿಗಣಿಸುವುದಿಲ್ಲ ಎಂದು ಮೌಖಿಕವಾಗಿ ನುಡಿಯಿತಲ್ಲದೆ, ಸರ್ಕಾರದ ವಸ್ತುಸ್ಥಿತಿ ವರದಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಅವಕಾಶಕ ಕಲ್ಪಿಸಿ ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಿತು.
ವಿಚಾರಣೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಜರಾಗಿದ್ದರು. ಅವರ ಹಾಜರಾತಿಯನ್ನು ದಾಖಲಿಸಿಕೊಂಡ ಪೀಠವು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಿತು.
ನೆಲವಾಗಿಲು ಗ್ರಾಮಸ್ಥರನ್ನು ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಸಂಬಂಧ ರಾಜ್ಯ ಸರ್ಕಾರ 1993ರಲ್ಲಿ ಆದೇಶ ಹೊರಡಿಸಿತ್ತು. ಆದರೆ, ಈವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಚಾಟಿ ಬೀಸಿದ್ದ ಹೈಕೋರ್ಟ್, ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಈ ಹಿಂದೆ ನಿರ್ದೇಶಿಸಿತ್ತು.