Divya Spandana alias Ramya 
ಸುದ್ದಿಗಳು

'ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಚಿತ್ರ ಬಿಡುಗಡೆಗೆ ಅನುಮತಿ; ₹50 ಲಕ್ಷ ಭದ್ರತೆ ಇಡಲು ನ್ಯಾಯಾಲಯ ಆದೇಶ

ನಿಗದಿತ ಸಂದರ್ಭಕ್ಕೆ ಸಿನಿಮಾ ಬಿಡುಗಡೆಯಾಗದಿದ್ದರೆ ನಿರ್ಮಾಪಕರು, ಥಿಯೇಟರ್‌ಗಳು ನಷ್ಟಕ್ಕೆ ತುತ್ತಾಗಲಿದ್ದು, ಇದು ಬೇರೆಯ ರೀತಿಯಲ್ಲಿ ದಾವೆಗೆ ನಾಂದಿ ಹಾಡಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Bar & Bench

ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಚಿತ್ರವನ್ನು ಶುಕ್ರವಾರ ಬಿಡುಗಡೆ ಮಾಡಲು ನಿರ್ಮಾಪಕರಿಗೆ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಗುರುವಾರ ಅನುಮತಿಸಿದೆ.

ನಟಿ ಹಾಗೂ ಮಾಜಿ ಸಂಸದೆ ದಿವ್ಯ ಸ್ಪಂದನಾ ಅಲಿಯಾಸ್‌ ರಮ್ಯಾ ಅವರು ಬುಧವಾರ ಸಲ್ಲಿಸಿದ್ದ ಮೂಲ ದಾವೆಯಲ್ಲಿ ಮಧ್ಯಂತರ ಅರ್ಜಿ ಪುರಸ್ಕರಿಸಿದ್ದ ಹೆಚ್ಚುವರಿ ಸಿಟಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಅವರು ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿದ್ದರು. ಅನುಮತಿ ಪಡೆಯದೇ ಟ್ರೇಲರ್‌ ಮತ್ತು ಸಿನಿಮಾದಲ್ಲಿ ತಮ್ಮ ಕ್ಲಿಪ್‌ ಬಳಕೆ ಮಾಡಲಾಗಿದೆ. ಹೀಗಾಗಿ, ಇದಕ್ಕೆ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ರಮ್ಯಾ ಕೋರಿದ್ದರು.

ನಿರ್ಮಾಪಕರು ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ಮೇಲ್ನೋಟಕ್ಕೆ ಪ್ರಕರಣ ಇದೆ ಎನಿಸಿರುವುದರಿಂದ ಮಧ್ಯಂತರ ಆದೇಶ ಮುಂದುವರಿಕೆ ಪರವಾಗಿ ಅನುಕೂಲತೆಯ ಸಮತೋಲನ ಇಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಅನುಮತಿ ಪಡೆಯದೇ ಕ್ಲಿಪ್‌ ಬಳಕೆ ಮಾಡಿರುವುದು ಉಲ್ಲಂಘನೆಯಾದರೂ ಹಣ ಪಾವತಿ ಮೂಲಕ ಅದಕ್ಕೆ ಪರಿಹಾರ ಸೂಚಿಸಬಹುದಾಗಿದೆ. ಟ್ರೇಲರ್‌ 42 ಲಕ್ಷ ವೀಕ್ಷಣೆ ಕಂಡಿದ್ದು, ಶುಕ್ರವಾರ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಚಿತ್ರ ನಿರ್ಮಾಪಕರನ್ನು ಪ್ರತಿನಿಧಿಸಿದ್ದ ವಕೀಲರು “ಕಲಾವಿದರ ಒಪ್ಪಂದ ನಿಯಮದ ಪ್ರಕಾರ ಸೃಜನಾತ್ಮಕತೆ ಕುರಿತಾದ ಅಂತಿಮ ನಿರ್ಧಾರವು ನಿರ್ಮಾಪಕರ ಬಳಿ ಇರುತ್ತದೆ. ಹೀಗಾಗಿ, ನಿರ್ಮಾಪಕರು ಒಪ್ಪಂದವನ್ನು ಉಲ್ಲಂಘಿಸಿಲ್ಲ. ಚಿತ್ರದ ಎಡಿಟಿಂಗ್‌ಗೆ ಸೆನ್ಸಾರ್‌ ಮಂಡಳಿಯ ಒಪ್ಪಿಗೆ ಅಗತ್ಯ. ಇದು ಸಾಕಷ್ಟು ಸಮಯ ಬೇಡುವ ಕೆಲಸವಾಗಿದೆ. ಹೀಗೆ ಮಾಡುವುದರಿಂದ ಪ್ರಾಯೋಗಿಕವಾಗಿ ಸಿನಿಮಾವನ್ನು ನಿದಗಿತ ದಿನಾಂಕಕ್ಕೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸೆನ್ಸಾರ್‌ ಮಂಡಳಿಯಿಂದ ಒಪ್ಪಿಗೆ ಪಡೆಯುವುದು ಅಸಾಧ್ಯ. ಸಿನಿಮಾ ನಿರ್ಮಾಣಕ್ಕೆ ಸಾಕಷ್ಟು ಬಂಡವಾಳ ಹೂಡಲಾಗಿದೆ. ಹೀಗಾಗಿ, ಮಧ್ಯಂತರ ಆದೇಶ ತೆರವು ಮಾಡಬೇಕು ಎಂದು ಕೋರಿದ್ದರು.

ಸೃಜನಾತ್ಮಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಒಪ್ಪಂದದಲ್ಲಿನ ನಿಯಮವು ನಿರ್ಮಾಪಕರ ನೆರವಿಗೆ ಬರುವುದಿಲ್ಲ. ಅದಾಗ್ಯೂ, ಸಿನಿಮಾ ನಿರ್ಮಾಪಕರು ಕ್ಲಿಪ್‌ ಬಳಕೆ ಮಾಡುವ ಹಕು ಹೊಂದಿದ್ದು, ಅದು ರಮ್ಯ ಅವರು ನೀಡುವ ಅನುಮತಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಹೀಗಾಗಿ, ಮೇಲ್ನೋಟಕ್ಕೆ ಒಪ್ಪಂದ ಉಲ್ಲಂಘನೆಯಾಗಿದ್ದು, ಅದಕ್ಕೆ ಹಣದ ಮೂಲಕ ಪರಿಹಾರ ನೀಡಬಹುದಾಗಿದೆ. ನಿಗದಿತ ಸಂದರ್ಭಕ್ಕೆ ಸಿನಿಮಾ ಬಿಡುಗಡೆಯಾಗದಿದ್ದರೆ ನಿರ್ಮಾಪಕರು, ಥಿಯೇಟರ್‌ಗಳು ನಷ್ಟಕ್ಕೆ ತುತ್ತಾಗಲಿದ್ದು, ಇದು ಬೇರೆಯ ರೀತಿಯಲ್ಲಿ ದಾವೆಗೆ ನಾಂದಿ ಹಾಡಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಈ ನೆಲೆಯಲ್ಲಿ ನಿರ್ಮಾಪಕರು ₹50 ಲಕ್ಷ ಭದ್ರತೆಯಾಗಿ ಪಾವತಿಸಿದರೆ ನಿಗದಿತ ವೇಳೆಗೆ ಸಿನಿಮಾ ಬಿಡುಗಡೆ ಮಾಡಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.