Divya Spandana alias Ramya
Divya Spandana alias Ramya 
ಸುದ್ದಿಗಳು

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರದಲ್ಲಿ ಬಳಸಿರುವ ನಟಿ ರಮ್ಯಾ ವಿಡಿಯೊ ತುಣುಕು ತೆಗೆಯಲು ನ್ಯಾಯಾಲಯ ನಿರ್ದೇಶನ

Bar & Bench

ಬಿಡುಗಡೆಗೆ ಸಿದ್ಧವಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಿಂದ ಅನಧಿಕೃತವಾಗಿ ಬಳಸಲಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನಾ) ಅವರ ವಿಡಿಯೊ ತುಣಕನ್ನು ತೆಗೆದುಹಾಕುವಂತೆ ಬೆಂಗಳೂರಿನ ನ್ಯಾಯಾಲಯವು ಈಚೆಗೆ ಚಿತ್ರ ನಿರ್ಮಾಣ ಹಾಗೂ ವಿತರಕ ಸಂಸ್ಥೆಗೆ ನಿರ್ದೇಶಿಸಿದೆ.

ತಮ್ಮ ವಿಡಿಯೊ ಕ್ಲಿಪ್ ಅನ್ನು ‘ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿದೆ ಎಂದು ಆರೋಪಿಸಿ ರಮ್ಯಾ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 83ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ (ವಾಣಿಜ್ಯ ನ್ಯಾಯಾಲಯ) ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಅವರು ಆದೇಶ ಮಾಡಿದ್ದಾರೆ.

ಯೂಟ್ಯೂಬ್ ಹಾಗೂ ಇತರೆ ಎಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಟ್ರೇಲರ್‌ನಿಂದ ರಮ್ಯಾ ಅವರ ವಿಡಿಯೊ ತುಣಕು ತೆಗೆದುಹಾಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಮ್ಯಾ ಅವರ ವಿಡಿಯೊ ತುಣುಕು, ಫೋಟೊ, ಜಿಫ್ ಇರುವ ಚಿತ್ರವನ್ನು ದಾವೆಯನ್ನು ನ್ಯಾಯಾಲಯ ಇತ್ಯರ್ಥಪಡಿಸುವರೆಗೂ ಬಿಡುಗಡೆ ಮಾಡಬಾರದು ಎಂದು ಚಿತ್ರ ನಿರ್ಮಾಣ ಸಂಸ್ಥೆ ಗುಲ್‌ಮೊಹರ್ ಫಿಲ್ಮ್ ಪ್ರೈ.ಲಿ, ವಿತರಕ ಸಂಸ್ಥೆ ಜೀ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸೆಸ್ ಪ್ರೈ.ಲಿ ಮತ್ತು ಪರಂವಾಹ್ ಸ್ಟೂಡಿಯೋಸ್‌ಗೆ ನಿರ್ದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ಮುಂದೂಡಿದೆ. ಚಿತ್ರವು ಜುಲೈ 21ರಂದು (ಶುಕ್ರವಾರ) ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ.

ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ನ್ಯಾಯಾಲಯದ ಮೆಟ್ಟಿಲೇರಿರುವ ನಟಿ ರಮ್ಯಾ, ಚಿತ್ರ ಮತ್ತು ಟ್ರೇಲರ್‌ನಲ್ಲಿ ತಮ್ಮ ವಿಡಿಯೊ ತುಣಕು ಮತ್ತು ಪೋಟೊ ಬಳಸಲು ಅನುಮತಿ ನಿರಾಕರಿಸಿದ್ದೆ. ಹೀಗಿದ್ದರೂ ಟ್ರೇಲರ್‌ನಲ್ಲಿ ಅನಧಿಕೃತವಾಗಿ ತಮ್ಮ ವಿಡಿಯೊ ತುಣುಕು ಬಳಸಲಾಗಿದೆ. ಇದು 2022ರ ಏಪ್ರಿಲ್‌ನಲ್ಲಿ ಮಾಡಿಕೊಂಡಿರುವ ‘ಆರ್ಟಿಸ್ಟಿಕ್ ಅಗ್ರೀಮೆಂಟ್’ ಮತ್ತು‘ಹಕ್ಕು ಸ್ವಾಮ್ಯ ಕಾಯಿದೆ-1957’ರ ಉಲ್ಲಂಘನೆಯಾಗಿದೆ. ಆದ್ದರಿಂದ, ತಮ್ಮ ವಿಡಿಯೊ ತುಣಕು ಒಳಗೊಂಡಿರುವ ಚಿತ್ರದ ಟ್ರೇಲರ್‌ನ ಲಿಂಕ್ ಅನ್ನು ಯೂಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಚಿತ್ರ ನಿರ್ಮಾಣ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಹಾಗೆಯೇ, ತಮ್ಮ ವಿಡಿಯೊ ತುಣುಕು ಇರುವ ಚಿತ್ರದ ಬಿಡುಗಡೆಗೆ ನಿರ್ಬಂಧ ಹೇರಬೇಕು. ಇಲ್ಲಿಯವರೆಗೆ ಟ್ರೇಲರ್‌ನಲ್ಲಿ ತಮ್ಮ ಅನುಮತಿಯಿಲ್ಲದೆ ಈ ತುಣುಕುಗಳನ್ನು ಬಳಸಿರುವುದಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಕಾನೂನು ಸೇವೆ ಪಡೆದಿರುವುದರ ಶುಲ್ಕ ನೀಡಬೇಕು ಎಂದು ಕೋರಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.