Arun Somanna 
ಸುದ್ದಿಗಳು

ಜೀವ ಬೆದರಿಕೆ, ವಂಚನೆ ಪ್ರಕರಣ: ಕೇಂದ್ರ ಸಚಿವ ಸೋಮಣ್ಣ ಪುತ್ರ ಅರುಣ್‌ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು

Siddesh M S

ಉದ್ಯಮದಲ್ಲಿ ವಂಚಿಸಿ, ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧಿತ ಪ್ರಕರಣದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ ಸೋಮಣ್ಣ ಪುತ್ರ ಡಾ. ಬಿ ಎಸ್‌ ಅರುಣ್‌ ಸೇರಿದಂತೆ ಮೂವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ತೃಪ್ತಿ ಹೆಗ್ಡೆ ಅವರು ದಾಖಲಿಸಿರುವ ಕ್ರಿಮಿನಲ್‌ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಡಾ. ಬಿ ಎಸ್‌ ಅರುಣ್‌, ಡಿ ಜೀವನ್‌ ಕುಮಾರ್‌ ಹಾಗೂ ಜಿ ಪ್ರಮೋದ್‌ ರಾವ್‌ ಸಲ್ಲಿಸಿದ್ದ ಅರ್ಜಿಯನ್ನು 45ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್‌ ಮೊಯಿನುದ್ದೀನ್‌ ಪುರಸ್ಕರಿಸಿದ್ದಾರೆ.

“ದೂರುದಾರೆ ತೃಪ್ತಿ ಹೆಗ್ಡೆ ಅವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಸಂಜಯ್‌ ನಗರ ಠಾಣೆಯ ಪೊಲೀಸರು ಮುಂದಿನ ಆದೇಶದವರೆಗೆ ಅರ್ಜಿದಾರರನ್ನು ಬಂಧಿಸಬಾರದು. ಅರ್ಜಿದಾರರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಪ್ರತಿವಾದಿ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಲಾಗಿದೆ. ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಚ್‌ ಎಸ್‌ ಚಂದ್ರಮೌಳಿ ಅವರು “ತೃಪ್ತಿ ಹೆಗ್ಡೆ ಅವರು ಜೂನ್‌ 2ರಂದು ನೀಡಿರುವ ಸುಳ್ಳು ದೂರನ್ನು ಆಧರಿಸಿ ಅರ್ಜಿದಾರರನ್ನು ಬಂಧಿಸಲು ಮುಂದಾಗಿದ್ದಾರೆ. 2019ರ ಏಪ್ರಿಲ್‌ 29ರ ಪಾಲುದಾರಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ದೂರುದಾರೆ ಮತ್ತು ಅರ್ಜಿದಾರರ ನಡುವೆ ವಿವಾದ ಆರಂಭವಾಗಿದೆ. ಅರುಣ್‌ ಅವರು ಕೇಂದ್ರ ಸಚಿವರ ಪುತ್ರನಾಗಿದ್ದು, ಜಾಮೀನುರಹಿತ ಅಪರಾಧಗಳ ಆರೋಪದ ಸಂಬಂಧ ಅವರನ್ನು ಬಂಧಿಸಲು ಆತುರ ತೋರುತಿದ್ದಾರೆ” ಎಂದು ವಾದಿಸಿದರು.

“ಪ್ರಕರಣದ ದಾಖಲೆಯನ್ನು ಪರಿಶೀಲಿಸಿದರೆ ಮೆಲ್ನೋಟಕ್ಕೆ ಅರುಣ್‌ ಅವರು ತೃಪ್ತಿ ಹೆಗ್ಡೆ ವಿರುದ್ಧ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯವು ತೃಪ್ತಿಗೆ ಸಮನ್ಸ್‌ ಜಾರಿ ಮಾಡಿತ್ತು. ಇದನ್ನು ಅವರು ಸ್ವೀಕರಿಸದ ಹಿನ್ನೆಲೆಯಲ್ಲಿ ಜಾಮೀನುರಹಿತ ವಾರೆಂಟ್‌ ಹೊರಡಿಸಲಾಗಿತ್ತು. ಆನಂತರ ನ್ಯಾಯಾಲಯಕ್ಕೆ ಹಾಜರಾಗಿ ತೃಪ್ತಿ ಹೆಗ್ಡೆ ಅವರು ಜಾಮೀನುರಹಿತ ವಾರೆಂಟ್‌ ಹಿಂಪಡೆಯುವಂತೆ ಮಾಡಿಕೊಂಡಿದ್ದಾರೆ. ಮೇಲೆ ಹೇಳಿರುವಂತೆ ಕಂಪೆನಿ ಪಾಲುದಾರಿಕೆ ಮತ್ತು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅರುಣ್‌ ಹಾಗೂ ಇತರೆ ಅರ್ಜಿದಾರರು ಮತ್ತು ತೃಪ್ತಿ ಹೆಗ್ಡೆ ನಡುವೆ ಗಂಭೀರವಾದ ವಿವಾದ ಇದೆ. ವಾಸ್ತವಿಕ ಅಂಶಗಳನ್ನು ಪರಿಗಣಿಸಿ, ಅರ್ಜಿದಾರರ ವಿರುದ್ಧ ಅಪರಾಧಗಳು ಜಾಮೀನುರಹಿತವಾಗಿವೆ. ಐಪಿಸಿ ಸೆಕ್ಷನ್‌ 327 ಅಪರಾಧವು ಗರಿಷ್ಠ 10 ವರ್ಷ ಶಿಕ್ಷೆ ವಿಧಿಸುವ ಅಪರಾಧವಾಗಿರುವುದರಿಂದ ಅರ್ಜಿದಾರರ ಆತಂಕ ಸತ್ಯದಿಂದ ಕೂಡಿರುವುದರಿಂದ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ತೃಪ್ತಿ ಹೆಗಡೆ ಅವರ ದೂರಿನನ್ವಯ ಸಂಜಯ ನಗರ ಪೊಲೀಸ್‌ ಠಾಣೆಯಲ್ಲಿ ಅರುಣ್‌ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿರುವ ಮಾಹಿತಿಯ ಸಾರಾಂಶ ಈ ರೀತಿ ಇದೆ:

ಸಂಜಯನಗರದ ಎಇಸಿಎಸ್‌ ನಿವಾಸಿ ದೂರುದಾರೆ ತೃಪ್ತಿ ಹೆಗ್ಡೆ ಹಾಗೂ ಆಕೆಯ ಪತಿ ಮಧ್ವರಾಜ್‌ ಎಂಬವರು ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ನಡೆಸುತ್ತಿದ್ದು, ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮಾರ್ಕೆಟಿಂಗ್‌ ಸರ್ವೀಸ್‌ ಮತ್ತು ಈವೆಂಟ್‌ ಮ್ಯಾನೇಜ್‌ಮೆಂಟ್‌ ಕೆಲಸದಲ್ಲಿದ್ದರು. 2013ರಲ್ಲಿ ಮಧ್ವರಾಜ್‌ ಅವರು ಸರ್ಕಾರಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸೋಮಣ್ಣ ಪುತ್ರ ಡಾ. ಅರುಣ್‌ ಪರಿಚಯವಾಗಿತ್ತು.

207ರಲ್ಲಿ ಮಧ್ವರಾಜ್‌ ಒಡೆತನದ ಕಂಪೆನಿಯು ಅರುಣ್‌ ಪುತ್ರಿಯ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿತ್ತು. ಇದು ಯಶಸ್ವಿಯಾಗಿ ನಡೆದುದ್ದರಿಂದ ಮಧ್ವರಾಜ್‌ ಮತ್ತು ಅರುಣ್‌ ಗೆಳೆತನ ಮತ್ತೊಂದು ಹಂತಕ್ಕೆ ಹೋಗಿತ್ತು. 2019ರಲ್ಲಿ ಮಧ್ವರಾಜ್‌ ಮತ್ತು ಅರುಣ್‌ ಇಬ್ಬರೂ ಪಾಲುದಾರಿಕೆ ಒಪ್ಪಂದ ಮೂಲಕ ನೈಬರ್‌ಹುಡ್‌ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ಆರಂಭಿಸಿದ್ದರು. ಆದರೆ, ಇದರಲ್ಲಿ ಮಧ್ವರಾಜ್‌ ಹೂಡಿಕೆ ಮಾಡಿರಲಿಲ್ಲ. ಇದರಲ್ಲಿ ಅರುಣ್‌ ಅವರು ಹೂಡಿಕೆ, ಪಾವತಿ ಹಾಗೂ ಸಂಗ್ರಹಣೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು.

ಒಪ್ಪಂದದ ಪ್ರಕಾರ ಕಂಪೆನಿ ಸರಿಯಾದ ರೀತಿಯಲ್ಲಿ ಪ್ರಗತಿ ಸಾಧಿಸದ ಕುರಿತು ತೃಪ್ತಿ ಪತಿ ಮಧ್ವರಾಜ್‌ ಅವರು ಅರುಣ್‌ರಲ್ಲಿ ವಿಚಾರಿಸಿದ್ದರು. ಆದರೆ, ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಆನಂತರ ತೃಪ್ತಿ ಮತ್ತು ಮಧ್ವರಾಜ್‌ ಒಟ್ಟಿಗೆ ಕಚೇರಿಗೆ ಹೋದಾಗ ಉದ್ಯೋಗಿಗಳ ಎದುರು ಅರುಣ್‌ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ, ಕಂಪೆನಿಯ ಪಾಲುದಾರಿಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.

ಜಯಪ್ರಕಾಶ್‌ ಎಂಬವರ ಮೂಲಕ ವಹಿಸಿರುವ ಕೆಲಸಗಳನ್ನು ನಿರ್ವಹಿಸುತಿದ್ದು, ಮಧ್ವರಾಜ್‌ ಅವರ ಲಾಭಾಂಶವನ್ನ ಶೇ. 30ರಿಂದ ಶೇ. 10ಕ್ಕೆ ಇಳಿಸಲಾಗಿತ್ತು. ಸರಿಯಾದ ಸಮಯಕ್ಕೆ ಉದ್ಯೋಗಿಗಳಿಗೆ ಸಂಬಳ ನೀಡದೇ ಇದ್ದುದರಿಂದ ಮಧ್ವರಾಜ್‌ ತಮ್ಮ ಸ್ವಂತ ಹಣದಿಂದ ಅವರಿಗೆ ವೇತನ ಪಾವತಿಸಿದ್ದಾರೆ.

ಆನಂತರ ಅರುಣ್‌ ನೈಬರ್‌ ಹುಡ್‌ ಕಂಪೆನಿಯನ್ನು ತನ್ನ ವಶಕ್ಕೆ ಪಡೆಯಲು ಕಂಪೆನಿ ಇರುವ ಜಾಗದ ಮಾಲೀಕರನ್ನು ಸಂಪರ್ಕಿಸಿ, ಲೀಸ್‌ ಒಪ್ಪಂದವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡುವಂತೆ ಕೋರಿದ್ದಾರೆ. ಇದಕ್ಕೆ ಅವರು ಒಪ್ಪದಿದ್ದರಿಂದ ಅವರಿಗೆ ಲೀಜ್‌ ಹಣ ನೀಡುವುದನ್ನೂ ಅರುಣ್‌ ನಿಲ್ಲಿಸಿದ್ದರು. ಪರಿಸ್ಥಿತಿಯಿಂದ ಬೇಸತ್ತು ತೃಪ್ತಿ ಮತ್ತು ಮಧ್ವರಾಜ್‌ ಅವರು ಕಂಪೆನಿ ಪಾಲುದಾರಿಕೆಯಿಂದ ಹೊರಬರಲು ನಿರ್ಧರಿಸಿ, ಅರುಣ್‌ ಸಂಪರ್ಕಿಸಿದ್ದರು. ಹೊರ ಹೋಗಬೇಕಾದರೆ ಕಂಪೆನಿ ಷೇರು ಖರೀದಿಸುವಂತೆ ಅರುಣ್‌ ಸೂಚಿಸಿದ್ದರು. ಇದಕ್ಕೆ ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಕಲಿ ಪತ್ರಗಳ ಮೇಲೆ ತಾವೇ (ಅರುಣ್‌) ಸಹಿ ಮಾಡಿ ತೃಪ್ತಿ ಮತ್ತು ಮಧ್ವರಾಜ್‌ ಕಂಪೆನಿಯ ಷೇರು ಖರೀದಿಸಿದ್ದಾರೆ ಎನ್ನುವ ದಾಖಲೆ ಸೃಷ್ಟಿಸಿದ್ದಾರೆ. 2020ರ ಮಾರ್ಚ್‌ 31ರ ಒಳಗೆ ಷೇರು ಹಣ ಪಾವತಿಸಬೇಕು ಎಂದು ಸೂಚಿಸಿದ್ದರು. ಖಾಲಿ ಚೆಕ್‌ಗಳನ್ನು ಪಡೆದು ಅವುಗಳಿಗೆ ಸಹಿ ಹಾಕಿಸಲು ಹಲ್ಲೆ ನಡೆಸಿದ್ದಾರೆ. ಅಲ್ಲದೇ, ತೃಪ್ತಿ ಹಾಗೂ ಮಧ್ವರಾಜ್‌ ಮಕ್ಕಳನ್ನು ಅಪಹರಿಸುವುದಾಗಿ ಹೇಳಿದ್ದಾರೆ.

ಗೂಂಡಾಗಳ ಮೂಲಕ ತೃಪ್ತಿ ಮತ್ತು ಮಧ್ವರಾಜ್‌ರನ್ನು ಬೆದರಿಸಿದ್ದಾರೆ. ಪಾಲುದಾರಿಕೆ ಒಪ್ಪಂದವನ್ನು ಸಾಲದ ಒಪ್ಪಂದವನ್ನಾಗಿಸಿ, ತೃಪ್ತಿ ಮತ್ತು ಮಧ್ವರಾಜ್‌ರಿಂದ ಬಲವಂತದಿಂದ ಸಹಿ ಮಾಡಿಸಿದ್ದಾರೆ. ಅರುಣ್‌ ಚಿತ್ರಹಿಂಸೆ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ರೂ. 76 ಲಕ್ಷವನ್ನು ಬ್ಯಾಂಕ್‌ ಮೂಲಕ ರೂ. 8 ಲಕ್ಷವನ್ನು ನಗದಿನ ರೂಪದಲ್ಲಿ ಮಧ್ವರಾಜ್‌ ಅವರು ಅರುಣ್‌ಗೆ ನೀಡಿದ್ದಾರೆ.  ಆನಂತರ ರೂ. 65 ಲಕ್ಷಕ್ಕೆ ಸಾಲ ಒಪ್ಪಂದಕ್ಕೆ ಮಧ್ವರಾಜ್‌ ಸಹಿ ಹಾಕಿದ್ದಾರೆ. ಇದಕ್ಕೆ ಎರಡನೇ ಆರೋಪಿ ಜೀವನ್‌ ಕುಮಾರ್‌ ಬಳಕೆ ಮಾಡಲಾಗಿದೆ. ಆನಂತರ ಮೂರನೇ ಆರೋಪಿ ಪ್ರಮೋದ್‌ ರಾವ್‌ ಎಂಬಾತನ ಮೂಲಕ ಮಧ್ವರಾಜ್‌, ತೃಪ್ತಿ ಹಾಗೂ ಅವರ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅರುಣ್‌, ಜೀವನ್‌ ಕುಮಾರ್‌ ಮತ್ತು ಪ್ರಮೋದ್‌ ರಾವ್‌ ವಿರುದ್ಧ ಸಂಜಯ್‌ ನಗರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 506 (ಕ್ರಿಮಿನಲ್‌ ಬೆದರಿಕೆ), 504 (ಅವಮಾನಿಸಿ ಸಾರ್ವಜನಿಕ ಶಾಂತಿ ಭಂಗಕ್ಕೆ ಪ್ರಚೋದನೆ),387 (ಕೊಲೆ ಬೆದರಿಕೆ),420 (ವಂಚನೆ),477A (ಸುಳ್ಳು ಲೆಕ್ಕ), 323 (ಉದ್ದೇಶಪೂರ್ವಕ ದಾಳಿ),327 (ಉದ್ದೇಶಪೂರ್ವಕವಾಗಿ ಆಸ್ತಿ ಅಥವಾ ಬೆಲೆಬಾಳುವ ಭದ್ರತೆಯ ಸುಲಿಗೆ),347 (ಸುಲಿಗೆ ಮಾಡಲು ಒತ್ತೆಯಾಳಾಗಿ ಇಟ್ಟುಕೊಳ್ಳುವುದು),354 (ಮಹಿಳೆಯ ಮೇಲೆ ಕ್ರಿಮಿನಲ್‌ ಪಡೆಯಿಂದ ಹಲ್ಲೆ) ಮತ್ತು 34 (ಸಂಘಟಿತ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ, ತೃಪ್ತಿ ಹೆಗ್ಡೆ ಅವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಅರುಣ್‌, ಜೀವನ್‌ ಮತ್ತು ಪ್ರಮೋದ್‌ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ 37ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಿದ್ದರು. ಇದರ ಆಧಾರದಲ್ಲಿ ಸಂಜಯ್‌ ನಗರ ಠಾಣೆ ಪೊಲೀಸರು ಎಫ್‌ಐಆರ್‌ ಮಾಡಿದ್ದಾರೆ.