ಸುದ್ದಿಗಳು

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಜಾಮೀನು ನೀಡಿದ ಬೆಂಗಳೂರು ನ್ಯಾಯಾಲಯ: ಆರೋಪಿಗಳ ಬಿಡುಗಡೆ

ಕೆಂಪಣ್ಣ ಹಾಗೂ ನಾಲ್ವರು ಆರೋಪಿಗಳು ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್ ನೀಡಬೇಕೆಂದು ನ್ಯಾಯಾಲಯ ಸೂಚಿಸಿತು. ಆದೇಶದಂತೆ ಕೆಂಪಣ್ಣ ಮತ್ತಿತರರು ಶನಿವಾರ ಮಧ್ಯರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Bar & Bench

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತೋಟಗಾರಿಕೆ ಮತ್ತು ಯೋಜನಾ ಸಚಿವ ವಿ ಮುನಿರತ್ನ ಅವರು ಹೂಡಿದ್ದ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಮತ್ತಿತರರಿಗೆ ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಸುಮಾರು ಅರ್ಧಗಂಟೆಗಳ ಕಾಲ ನಡೆದ ವಾದಸರಣಿ ಬಳಿಕ ನ್ಯಾಯಾಧೀಶರಾದ ಕೆ ಎನ್‌ ಶಿವಕುಮಾರ್ ಅವರು  ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 436 ಅನ್ವಯವಾಗುತ್ತದೆ.  ಆ ಸೆಕ್ಷನ್‌ ಪ್ರಕಾರ ಜಾಮೀನು ನೀಡಬಹುದಾದ ಅಪರಾಧಗಳಿಗೆ ಜಾಮೀನು ನೀಡಬೇಕು ಎಂದು ತಿಳಿಸಿ ಷರತ್ತುಬದ್ಧ ಜಾಮೀನಿಗೆ ಆದೇಶಿಸಿದರು.

ಕೆಂಪಣ್ಣ ಹಾಗೂ ನಾಲ್ವರು ಆರೋಪಿಗಳು ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್‌ ನೀಡಬೇಕೆಂದು ನ್ಯಾಯಾಲಯ ಸೂಚಿಸಿತು. ಆದೇಶದಂತೆ ಕೆಂಪಣ್ಣ ಮತ್ತಿತರರು ಶನಿವಾರ ಮಧ್ಯರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಇದಕ್ಕೂ ಮುನ್ನ ಡಿ. ಕೆಂಪಣ್ಣ ಪರ ವಕೀಲರು ಸಮನ್ಸ್‌ ಆದೇಶ ಕೈತಪ್ಪಿದ್ದರಿಂದ ತಮಗೆ ದಯವಿಟ್ಟು ಜಾಮೀನು ನೀಡಬೇಕು. ಪ್ರಕರಣದಲ್ಲಿ ಸೆಕ್ಷನ್‌ 436 ಅನ್ವಯಿಸುತ್ತದೆ. ಇದೊಂದು ಜಾಮೀನು ನೀಡಬಹುದಾದ ಪ್ರಕರಣ ಎಂದು ವಾದಿಸಿದರು.

ಆದರೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಸಿಆರ್‌ಪಿಸಿ ಸೆಕ್ಷನ್‌ 88ರ ಪ್ರಕಾರ ಒಮ್ಮೆ ಬಂಧನ ವಾರೆಂಟ್‌ ಜಾರಿಗೊಳಿಸಿದ ಬಳಿಕ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದಾಗ ಮಾತ್ರ ಜಾಮೀನು ನೀಡಬಹುದೇ ವಿನಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಅಲ್ಲ. ಸಮನ್ಸ್‌ ನಿರಾಕರಿಸಿದ್ದಾಗ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಲಾಗುತ್ತದೆ. ಆಗ ಸೆಕ್ಷನ್‌ 88ರ ಪ್ರಕಾರ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಅಲ್ಲಿಯವರೆಗೆ ಅವರನ್ನು ಬಿಡುಗಡೆ ಮಾಡುವಂತಿಲ್ಲ” ಎಂದಿದ್ದರು.