ಸುದ್ದಿಗಳು

ಆರ್‌ಎಸ್‌ಎಸ್‌ ನಿಂದನೆ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ನಲಪಾಡ್‌ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಮೊಹಮದ್ ನಲಪಾಡ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಧೀಶ ಸಂದೀಪ್‌ ಪಾಟೀಲ್‌ ಪುರಸ್ಕರಿಸಿದ್ದಾರೆ.

Bar & Bench

“ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಘನತೆಗೆ ಹಾನಿ ಉಂಟು ಮಾಡುವ ಮಾತುಗಳನ್ನು ಆಡಿದ್ದಾರೆ” ಎಂಬ ಹಿನ್ನೆಲೆಯಲ್ಲಿನ ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ಆರೋಪಿಗಳಾಗಿರುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಯುವ ಕಾಂಗ್ರೆಸ್‌ ಮುಖಂಡ ಮೊಹಮದ್‌ ನಲಪಾಡ್‌ಗೆ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಮೊಹಮದ್ ನಲಪಾಡ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಧೀಶ ಸಂದೀಪ್‌ ಪಾಟೀಲ್‌ ಪುರಸ್ಕರಿಸಿದ್ದಾರೆ.

Sandeep Patil XLII Addl. Chief Judicial Magistrate

“ಇಬ್ಬರೂ ಆರೋಪಿಗಳು ತಲಾ ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ₹10 ಸಾವಿರ ಮೊತ್ತದ ನಗದು ಭದ್ರತೆ ನೀಡಬೇಕು” ಎಂಬ ಷರತ್ತು ವಿಧಿಸಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು.

ಆರ್‌ಎಸ್‌ಎಸ್‌ನ ಸ್ವಯಂಸೇವಕರೂ ಆದ ಬೆಂಗಳೂರಿನ ಎ ತೇಜಸ್‌ ಸಲ್ಲಿಸಿದ್ದ ಖಾಸಗಿ ದೂರನ್ನು ನ್ಯಾಯಾಲಯ ಸಂಜ್ಞೇಯ ಅಪರಾಧಗಳಡಿ ಪರಿಗಣಿಸಿದೆ.

04.10.2025ರಂದು ಪ್ರಿಯಾಂಕ್‌ ಖರ್ಗೆ ಅವರು “ಆರ್‌ಎಸ್‌ಎಸ್‌ನವರು ಸರ್ಕಾರಿ ಜಾಗಗಳು ಮತ್ತು ಶಾಲಾ ಆವರಣದಲ್ಲಿ ಯಾವುದೇ ರೀತಿಯ ಸಮಾರಂಭ ಮತ್ತು ಚಟುವಟಿಕೆಗಳನ್ನು ಮಾಡದಂತೆ ನಿಷೇಧಿಸಬೇಕು. ಅವರು ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದು, ದೇಶಕ್ಕೆ ಮಾರಕವಾಗಿದ್ದಾರೆ. ಯುವಕರನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತಿದ್ದಾರೆ” ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು ಎಂದು ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

14.10.2025ರಂದು “ನಿಮ್ಮ ಮನೆಯಲ್ಲಿ ನಿಮ್ಮ ಅಣ್ಣ, ತಮ್ಮಂದಿರು, ಗೆಳೆಯರು, ಬಂಧು-ಬಳಗದವರು ಯಾರಾದರೂ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅವರೊಂದಿಗಿನ ಸಂಬಂಧ ಕಡಿತ ಮಾಡಿ” ಎಂದು ಪೋಸ್ಟ್‌ ಮಾಡಿದ್ದರು ಎಂದು ವಿವರಿಸಲಾಗಿದೆ.

ಇದಾದ ಎರಡು ದಿನಗಳ ಬಳಿಕ ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಎಕ್ಸ್‌ನಲ್ಲಿ “ಗೌರಿ ಲಂಕೇಶ್‌, ಪಾನ್ಸರೆ ಮತ್ತು ಎಂ ಎಂ ಕಲಬುರ್ಗಿ ಅವರನ್ನು ಆರ್‌ಎಸ್‌ಎಸ್‌ನವರು ಹತ್ಯೆ ಮಾಡಿದ್ದಾರೆ. ಅವರೇ ನೇರ ಹೊಣೆಗಾರರಾಗಿದ್ದು, ತಾಲಿಬಾನ್‌ ಸಂಸ್ಕೃತಿಯವರಾಗಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದರು ಎಂದು ಆಕ್ಷೇಪಿಸಲಾಗಿತ್ತು.

ಇನ್ನು, ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಅವರು “ಆರ್‌ಎಸ್‌ಎಸ್‌ನವರ ಚಡ್ಡಿಯಲ್ಲಿ ತಾಕತ್ತು ಇಲ್ಲ” ಎಂದಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಮೂಲಕ ಆರ್‌ಎಸ್‌ಎಸ್‌ ಮಾನಹಾನಿ ಮಾಡಲಾಗಿದ್ದು, ಲಕ್ಷಾಂತರ ಕಾರ್ಯಕರ್ತರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಖಾಸಗಿ ದೂರಿನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಬೆಂಗಳೂರಿನ ಎ ತೇಜಸ್‌ ದೂರಿದ್ದರು. ಇದನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿತ್ತು.