ಮೈಸೂರಿನಲ್ಲಿ ಕಳೆದ ವರ್ಷ ಜರುಗಿದ ರಾಜ್ಯ ವಕೀಲರ ಸಮ್ಮೇಳನದ ವೇಳೆ ಹಣಕಾಸು ದುರ್ಬಳಕೆ ಮಾಡಿರುವ ಆರೋಪದ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅಧ್ಯಕ್ಷ ಎಚ್ ಎಲ್ ವಿಶಾಲ್ ರಘು, ಉಪಾಧ್ಯಕ್ಷ ವಿನಯ್ ಮಂಗ್ಳೇಕರ್ ಹಾಗೂ ವ್ಯವಸ್ಥಾಪಕ ಪುಟ್ಟೇಗೌಡ ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಸೋಮವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೆಎಸ್‌ಬಿಸಿ ಅಧ್ಯಕ್ಷ ವಿಶಾಲ್ ರಘು, ವಿನಯ್ ಮಂಗ್ಳೇಕರ್ ಹಾಗೂ ಪುಟ್ಟೇಗೌಡ ಸಲ್ಲಿಸಿದ್ದ ಅರ್ಜಿಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಜೈಶಂಕರ್ ಪುರಸ್ಕರಿಸಿದ್ದಾರೆ.
“ಅರ್ಜಿದಾರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಅರ್ಜಿದಾರರ ಬಂಧನವಾದರೆ ತಲಾ ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು” ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
“ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಮೇಲ್ನೋಟಕ್ಕೆ ಮುಗ್ಧತೆ ಸಾಬೀತುಪಡಿಸಿದರೆ ಅವರನ್ನು ಜೈಲಿಗೆ ಅಟ್ಟಲಾಗದು. ರಾಜ್ಯಮಟ್ಟದ ವಕೀಲರ ಸಮಾವೇಶದ ವೇಳೆಗೆ ಅರ್ಜಿದಾರರು ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಯ ಮತ್ತು ವೆಚ್ಚ ಹಾಗೂ ಆಡಿಟ್ ವರದಿಗೆ ಕೆಎಸ್‌ಬಿಸಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಸಮಾವೇಶದ ಖರ್ಚು-ವೆಚ್ಚಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಬೇಕಿದೆ. ಹೀಗಾಗಿ, ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಅರ್ಜಿದಾರರು ಕೆಎಸ್‌ಬಿಸಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕರಾಗಿದ್ದು, ಅವರು ನ್ಯಾಯದಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ, ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನ್ಯಾಯಯೋಚಿತ ಮತ್ತು ಸಕಾರಣಗಳಿವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಧಾನಸೌಧ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವಿಶಾಲ್ ರಘು, ವಿನಯ್ ಮಂಗ್ಳೇಕರ್ ಮತ್ತು ಪುಟ್ಟೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಿಗೇ ಬಂಧನ ಭೀತಿಯಿಂದ ಅವರು ನಿರೀಕ್ಷಣಾ ಜಾಮೀನು ಕೋರಿದ್ದರು.
ಪ್ರಕರಣದ ಹಿನ್ನೆಲೆ: ರಾಜ್ಯ ವಕೀಲರ ಪರಿಷತ್ ವತಿಯಿಂದ ಮೈಸೂರಿನಲ್ಲಿ 2023ರ ಆಗಸ್ಟ್ 12 ಮತ್ತು 13ರಂದು ಎರಡು ದಿನಗಳ ಕಾಲ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸಮ್ಮೇಳನದ ಪ್ರತಿನಿಧಿ ವಕೀಲರಿಂದ ತಲಾ ₹1 ಸಾವಿರದಂತೆ ಒಟ್ಟು ₹1,16,33,000 ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ರಾಜ್ಯ ಸರ್ಕಾರ ₹1.8 ಲಕ್ಷ ಅನುದಾನ ನೀಡಿತ್ತು ಮತ್ತು ರಾಜ್ಯ ವಕೀಲರ ಪರಿಷತ್‌ನಿಂದ ₹75 ಲಕ್ಷ ಬಿಡುಗಡೆಯಾಗಿತ್ತು. ಒಟ್ಟು ಮೊತ್ತ ₹3,30,33,000 ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ಈ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದೆ ಎಂದು ಹಿರಿಯ ವಕೀಲ ಎಸ್ ಬಸವರಾಜು ಆರೋಪಿಸಿದ್ದಾರೆ.
ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‌ನ ₹50 ಲಕ್ಷ ಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿ, ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂಪಾಯಿಯನ್ನು, ನಕಲಿ ಬಿಲ್ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಜಿಎಸ್‌ಟಿ ಹಣವನ್ನು ಸಲ್ಲಿಸದೇ ಮೋಸ ಮಾಡಿದ್ದು ಪರಿಷತ್ತಿನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ವಿಧಾನ ಸೌಧದ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ), 406 (ನಂಬಿಕೆ ದ್ರೋಹ), 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ), 468 (ಫೋರ್ಜರಿ), 471 (ನಕಲಿ ದಾಖಲೆಯನ್ನು ಅಪರಾಧದಲ್ಲಿ ಬಳಸುವುದು), 477–ಎ (ಬ್ಯಾಂಕ್ ಖಾತೆ ದುರುಪಯೋಗ) 34 (ಸಮಾನ ಉದ್ದೇಶ) ಮತ್ತು 120–ಬಿ (ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.