ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಪ್ರಕರಣದಲ್ಲಿನ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳು ಬೆಂಗಳೂರಿನ ಸತ್ರ ನ್ಯಾಯಾಲಯದ ಮುಂದೆ ಶುಕ್ರವಾರ ಹಾಜರಾದರು.
ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೈಶಂಕರ್ ಅವರು ಕೊಲೆ ಪ್ರಕರಣದ ವಿಚಾರಣೆ ನಡೆಸಿದರು. ಆರೋಪಿಗಳ ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿತು.
ಅಲ್ಲದೆ, ಜನವರಿ 12ರಿಂದ 16ವರೆಗೆ ಮೈಸೂರಿಗೆ ಹೋಗಲು ದರ್ಶನ್‌ಗೆ ನ್ಯಾಯಾಲಯ ಅನುಮತಿ ನೀಡಿತು. ಅದೇ ರೀತಿ ತನ್ನ ಫ್ಯಾಷನ್ ಡಿಸೈನ್ ಸಂಸ್ಥೆಗಾಗಿ ಕಚ್ಚಾವಸ್ತುಗಳನ್ನು ಖರೀದಿಸುವುದಕ್ಕಾಗಿ ಪವಿತ್ರಾ ಗೌಡಗೆ ಜನವರಿ 15 ರಿಂದ ಫೆಬ್ರವರಿ 10ರವರೆಗೆ ಮುಂಬೈ ಹಾಗೂ ದೇಶದ ಇತರೆ ಪ್ರದೇಶಕ್ಕೆ ಹೋಗಲು ನ್ಯಾಯಾಲಯ ಅನಮತಿಸಿತು.
ಉಳಿದಂತೆ, ದರ್ಶನ್ ಮ್ಯಾನೇಜರ್ ನಾಗರಾಜ್‌ಗೆ ಫೆಬ್ರವರಿ 24ವರೆಗೆ ಮೈಸೂರಿಗೆ ತೆರಳಲು, ರಾಘವೇಂದ್ರ, ಜಗದೀಶ್, ಅನುಕುಮಾರ್ ಅವರಿಗೆ ಜನವರಿ 10ರಿಂದ ಫೆಬ್ರವರಿ 24ರವರೆಗೆ ಚಿತ್ರದುರ್ಗದ ತಮ್ಮ ಹುಟ್ಟೂರಿಗೆ ಹೋಗಲು ನ್ಯಾಯಾಲಯ ಅನುಮತಿಸಿತು.
ಇಂದಿನ ವಿಚಾರಣೆಗೆ ದರ್ಶನ್, ಪವಿತ್ರಾ ಗೌಡ, ನಾಗರಾಜು, ಜಗದೀಶ್, ಅನುಕುಮಾರ್, ರಾಘವೇಂದ್ರ ಹಾಜರಾಗಿದ್ದರು. ಇತರೆ ಆರೋಪಿಗಳ ಪರ ವಕೀಲರು ಹಾಜರಾತಿಗೆ ವಿನಾಯಿತಿ ಕೋರಿದ್ದರು.
ನ್ಯಾಯಾಲಯವು ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನಂತರ ಆರೊಪಿಗಳ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಬೆಂಗಳೂರು ಬಿಟ್ಟು ತೆರಳಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು.
ಪವಿತ್ರಾಗೆ ದರ್ಶನ್ ಸಾಂತ್ವನ: ಇಂದು ಬೆಳಗ್ಗೆ 10.55ರ ವೇಳೆಗೆ ಕೋರ್ಟ್‌ಗೆ ಬಂದ ಪವಿತ್ರಾ ಗೌಡ, ಕೋರ್ಟ್ ಹಾಲ್‌ನ ಒಂದು ಮೂಲೆಗೆ ಹೋಗಿ ನಿಂತರು. 11.10ರ ಸುಮಾರಿಗೆ ದರ್ಶನ್ ಸಹ ಕೋರ್ಟ್‌ಗೆ ಪ್ರವೇಶಿಸಿ ಮತ್ತೊಂದು ಬಾಗಿಲ ಬಳಿಯ ಮೂಲೆಯಲ್ಲಿ ನಿಂತರು.
ಈ ವೇಳೆ ದರ್ಶನ್ ಅನ್ನು ಕಂಡ ಪವಿತ್ರಾ ಗೌಡ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡರು. ಈ ದೃಶ್ಯ ಕಂಡ ದರ್ಶನ್, ಜನಸಂದಣಿಯ ನಡುವೆಯೇ ಮತ್ತೊಂದು ಮೂಲೆಯಲ್ಲಿ ನಿಂತಿದ್ದ ಪವಿತ್ರಾಗೌಡ ಬಳಿಗೆ ತೆರಳಿದರು. ಹತ್ತಿರದಿಂದ ದರ್ಶನ್ ಕಂಡು ಪವಿತ್ರಾ ಮತ್ತಷ್ಟು ಭಾವುಕರಾದರು. ಈ ವೇಳೆ ದರ್ಶನ್ ಆಕೆಯನ್ನು ಸಾಂತ್ವನ ಮಾಡಿದರು.