ನೋಂದಾಯಿತ ಕನ್ಸೈರ್ಜ್ ಟ್ರೇಡ್‌ಮಾರ್ಕ್ ಬಳಸದಂತೆ ಸ್ಯಾಮ್‌ಸಂಗ್ ಇಂಡಿಯಾ ವಿರುದ್ಧ ಬೆಂಗಳೂರಿನ ನ್ಯಾಯಾಲಯವೊಂದು ಮಧ್ಯಂತರ ಆದೇಶ ಹೊರಡಿಸಿದೆ.
“ಮುಂದಿನ ವಿಚಾರಣೆಯವರೆಗೆ ಒಂದನೇ ಫಿರ್ಯಾದುದಾರರಿಗೆ ಸೇರಿದ ಕನ್ಸೈರ್ಜ್ ಟ್ರೇಡ್‌ಮಾರ್ಕ್ ಅನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಾಗೂ ಕಾನೂನುಬಾಹಿರವಾಗಿ ಬಳಸದಂತೆ ಎರಡನೇ ಪ್ರತಿವಾದಿ, ಅವರ ಏಜೆಂಟರುಗಳು, ಸೇವಕರು ಅಥವಾ ಯಾವುದೇ ರೀತಿಯಲ್ಲಿ ತಮಗೆ ಸೇರಬೇಕು ಎಂದು ವಾದಿಸುವವರ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶ ಹೊರಡಿಸುತ್ತಿದ್ದೇವೆ” ಎಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರತಿಬಂಧಕಾದೇಶ ಹೊರಡಿಸಲು ಮೇಲ್ನೋಟಕ್ಕೆ ಪ್ರತಿವಾದಿಗಳ ವಿರುದ್ದ ಪ್ರಕರಣವಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಪ್ರತಿವಾದಿಗಳ ವಾದವನ್ನು ಆಲಿಸಬೇಕಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯವು ಪ್ರತಿಬಂಧಕಾಜ್ಞೆ ಹೊರಡಿಸಿ, ಆಗಸ್ಟ್ 5ಕ್ಕೆ ವಿಚಾರಣೆ ಮುಂದೂಡಿತು.
ಲೆಸ್‌ಕನ್ಸೈರ್ಜ್ಸ್ ಸರ್ವೀಸಸ್ ಪ್ರೈ. ಲಿ ಮತ್ತು ಕ್ಲಬ್ ಕನ್ಸೈರ್ಜ್ ಸರ್ವೀಸಸ್ (ಇಂಡಿಯಾ) ಪ್ರೈ. ಲಿ ಜೊತೆಗೆ ಅದರ ಸಂಸ್ಥಾಪಕರಾದ ದೀಪಾಲಿ ಸಿಕಂದ್ ಅವರು ಸ್ಯಾಮ್‌ಸಂಗ್ ಇಂಡಿಯಾ ಮತ್ತು ಸ್ಟೋರಿ ಎಕ್ಸ್‌ಪೀರಿಯನ್ಸ್ ಪ್ರೈ. ಲಿ. ವಿರುದ್ಧ ಟ್ರೇಡ್‌ಮಾರ್ಕ್ ಕನ್ಸೈರ್ಜ್ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ಕನ್ಸೈರ್ಜ್ ನೋಂದಾವಣೆ ಮತ್ತು ಹಕ್ಕುಗಳನ್ನು ಸಿಕಂದ್ ಹೊಂದಿದ್ದಾರೆ.
ಭಾರತದಲ್ಲಿ ಕನ್ಸೈರ್ಜ್ ಸೇವೆಗಳನ್ನು ಪರಿಚಯಿಸಿದ ಮೊದಲ ವ್ಯಕ್ತಿ ಎಂದು ಹೇಳಿಕೊಳ್ಳುವ ಸಿಕಂದ್, ಸ್ಟೋರಿ ಎಕ್ಸ್‌ಪೀರಿಯನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸ್ಯಾಮ್‌ಸಂಗ್ ಇಂಡಿಯಾ, ಅಧ್ಯಕ್ಷರ ಕ್ಲಬ್‌ಗೆ ಸಂಬಂಧಿಸಿದಂತೆ ವಿವಿಧ ಕಿರು ಹೊತ್ತಿಗೆ, ಪ್ರಚಾರ ಸಾಮಗ್ರಿಗಳು, ಜಾಹೀರಾತುಗಳು ಇತ್ಯಾದಿಗಳಲ್ಲಿ “ಕನ್ಸೈರ್ಜ್” ಎಂಬ ಟ್ರೇಡ್‌ಮಾರ್ಕ್ ಅನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ.
ಫಿರ್ಯಾದುದಾರರ ಸದ್ದುದೇಶ ಮತ್ತು ಖ್ಯಾತಿಯ ಮೇಲೆ ಸ್ಟೋರಿ ಎಕ್ಸ್‌ಪೀರಿಯ್ಸ್ ಸವಾರಿ ಮಾಡುತ್ತಿದೆ. ಇದಲ್ಲದೆ, ಪ್ರತಿವಾದಿಗಳು ಫಿರ್ಯಾದುದಾರರ ಇಮೇಜ್ ದುರ್ಬಲ ಮತ್ತು ಕಳಂಕಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. ವಕೀಲರಾದ ಸ್ಪೆಕ್ಟ್ರಂ ಲೀಗಲ್ ಸಂಸ್ಥೆಯ ಚಿಂತನ್ ಚಿನ್ನಪ್ಪ ಅವರು ಫಿರ್ಯಾದುದಾರರನ್ನು ಪ್ರತಿನಿಧಿಸಿದ್ದು, ಅವರಿಗೆ ಆನಂದಿ ಕಾಮನಿ ಮತ್ತು ವಿಶಾಖ ನಿಕ್ಕಂ ಸಹಕಾರ ನೀಡಿದರು.