ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಐದು ದಿನ ಇ ಡಿ ಕಸ್ಟಡಿಗೆ ಗೇಮ್ಸ್‌ಕ್ರಾಫ್ಟ್‌ನ ಪೃಥ್ವಿರಾಜ್‌ ಸಿಂಗ್‌, ದೀಪಕ್‌ ಸಿಂಗ್‌

ದೆಹಲಿಯಲ್ಲಿ ಬಂಧಿತರಾಗಿದ್ದ ಪೃಥ್ವಿರಾಜ್‌ ಮತ್ತು ದೀಪಕ್‌ ಸಿಂಗ್‌ ಅವರನ್ನು ಟ್ರಾನ್ಸಿಟ್‌ ರಿಮ್ಯಾಂಡ್‌ ಮೇಲೆ ಕರೆತಂದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

Bar & Bench

ಆನ್‌ಲೈನ್ ನೈಜ ಹಣ ಗೇಮಿಂಗ್‌ ಗೇಮಿಂಗ್ ವೇದಿಕೆಗಳನ್ನು ತಿರುಚಿದ ಆರೋಪದಿಂದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮ್ಸ್‌ಕ್ರಾಫ್ಟ್ ಕಂಪನಿಯ ಮತ್ತಿಬ್ಬರು ನಿರ್ದೇಶಕರಾದ ಪೃಥ್ವಿರಾಜ್‌ ಸಿಂಗ್ ಮತ್ತು ದೀಪಕ್‌ ಸಿಂಗ್‌ ಅಹ್ಲಾವತ್‌ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಶನಿವಾರ ಐದು ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ.

ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ಜಾರಿ ನಿರ್ದೇಶನಾಲಯದ ರಿಮ್ಯಾಂಡ್‌ ಅರ್ಜಿ ಪುರಸ್ಕರಿಸಿ, ಮೇ 13ರವರೆಗೆ ಎರಡನೇ ಆರೋಪಿ ಪೃಥ್ವಿರಾಜ್‌ ಮತ್ತು ಮೂರನೇ ಆರೋಪಿ ದೀಪಕ್‌ ಸಿಂಗ್‌ ಅವರನ್ನು ಕಸ್ಟಡಿಗೆ ನೀಡಿತು. ನಿನ್ನೆ ಮೊದಲನೇ ಆರೋಪಿ ವಿಕಾಸ್‌ ತನೇಜಾ ಅವರನ್ನು ನ್ಯಾಯಾಲಯವು ಐದು ದಿನ ಇ ಡಿ ಕಸ್ಟಡಿಗೆ ನೀಡಿತ್ತು.

ದೆಹಲಿಯಲ್ಲಿ ಬಂಧಿತರಾಗಿದ್ದ ಪೃಥ್ವಿರಾಜ್‌ ಮತ್ತು ದೀಪಕ್‌ ಸಿಂಗ್‌ ಅವರನ್ನು ಟ್ರಾನ್ಸಿಟ್‌ ರಿಮ್ಯಾಂಡ್‌ ಮೇಲೆ ಕರೆತಂದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಈ ನಡುವೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಮನೆ ಊಟ ಪೂರೈಸಲು ಅನುಮತಿಸುವಂತೆ ಕೋರಿ ದೀಪಕ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತು.

ಗೇಮ್ಸ್‌ಕ್ರಾಫ್ಟ್‌ನ ಇತರೆ ಸಂಸ್ಥಾಪಕರು ಮತ್ತು ನಿರ್ದೇಶಕರ ಜೊತೆಗೂಡಿ ದೀಪಕ್‌ ಸಿಂಗ್‌ ಅವರು ಮಾಜಿ ಪ್ರಧಾನ ವಿತ್ತ ಅಧಿಕಾರಿ ರಮೇಶ್‌ ಪ್ರಭು ಜೊತೆ ಸೇರಿ ₹250 ಕೋಟಿ ಹಣವನ್ನು ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌ ಹಾಗೂ ಮುಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಇ ಡಿ ಆರೋಪಿಸಿದೆ.

ನೈಜ ಹಣ ಗೇಮಿಂಗ್‌ ವೇದಿಕೆಗಳ ಮೂಲಕ ಗೇಮ್ಸ್‌ಕ್ರಾಫ್ಟ್‌ ಸಂಸ್ಥೆಯು ನೈಜ ಆಟಗಾರರಿಗೆ ವಂಚಿಸಿದೆ. ಸೇವಾ ಷರತ್ತುಗಳನ್ನು ಉಲ್ಲಂಘಿಸಿ ಆರೋಪಿಗಳು ಅಕ್ರಮವಾಗಿ ನೈಜ ಆಟಗಾರರ ಖಾತೆಗಳು ಮತ್ತು ವಾಲೆಟ್‌ಗಳನ್ನು ನಿರ್ಬಂಧಿಸಿ ಅವರಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಉದ್ಯಮದ ವೆಚ್ಚ ಎಂದು ನಕಲಿ ಮತ್ತು ಷೆಲ್‌ ಕಂಪನಿಗಳಿಗೆ ಹಣ ಕಳುಹಿಸಿ, ಅದನ್ನು ಆನಂತರ ಅಕ್ರಮ ಚಟುವಟಿಕೆ ಮತ್ತು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇ ಡಿ ಆರೋಪಿಸಿದೆ.

2026ರಲ್ಲಿ ತೆಲಂಗಾಣದಲ್ಲಿ ಮೂರು ಎಫ್‌ಐಆರ್‌ ದಾಖಲಾಗಿದ್ದು, ಕಂಪನಿಯು ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ನಿರ್ವಹಿಸುತ್ತಿದೆ. ಆಟವನ್ನು ತಿರುಚಿ, ಬಳಕೆದಾರರಿಗೆ ವಂಚಿಸಲಾಗಿದೆ. ಆನಂತರ ನಕಲಿ ವೆಚ್ಚ ತೋರಿಸಿ, ಅದನ್ನು ನಗದಿನ ರೂಪದಲ್ಲಿ ವಾಪಸ್‌ ಪಡೆಯಲಾಗಿದೆ ಎಂದು ಇ ಡಿ ಆರೋಪಿಸಿದೆ.

ಕಂಪನಿಯು ರಮ್ಮಿ ಕಲ್ಚರ್‌, ರಮ್ಮಿ ಸರ್ಕಲ್‌ ಮತ್ತು ರಮ್ಮಿ ಟೈಮ್‌ ಎಂಬ ವೇದಿಕೆಗಳ ಮೂಲಕ ಮೋಸದ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಜನರನ್ನು ವಂಚಿಸುವ ಕೃತ್ಯದಲ್ಲಿ ತೊಡಗಿದೆ ಎಂದು ದೂರಲಾಗಿದೆ.

ಜಾರಿ ನಿರ್ದೇಶನಾಲಯವನ್ನು ವಿಶೇಷ ಸರ್ಕಾರಿ ಅಭಿಯೋಜಕಿ ಡಿ ಎಂ ಮಹೇಶ್ವರಿ ಪ್ರತಿನಿಧಿಸಿದ್ದರು. ಪೃಥ್ವಿರಾಜ್‌ ಮತ್ತು ದೀಪಕ್‌ ಸಿಂಗ್‌ ಅವರನ್ನು ಹಿರಿಯ ವಕೀಲ ಸಜನ್‌ ಪೂವಯ್ಯ ಪ್ರತಿನಿಧಿಸಿದ್ದರು.