Gamekraft, ED & Bengaluru sessions court 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಗೇಮ್ಸ್‌ಕ್ರಾಫ್ಟ್‌ ಸಂಸ್ಥಾಪಕ ವಿಕಾಸ್‌ ತನೇಜಾ ಐದು ದಿನ ಇ ಡಿ ಕಸ್ಟಡಿಗೆ

ಕಂಪನಿಯು ರಮ್ಮಿ ಕಲ್ಚರ್‌, ರಮ್ಮಿ ಸರ್ಕಲ್‌ ಮತ್ತು ರಮ್ಮಿ ಟೈಮ್‌ ಎಂಬ ವೇದಿಕೆಗಳ ಮೂಲಕ ಮೋಸದ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಜನರನ್ನು ವಂಚಿಸುವ ಕೃತ್ಯದಲ್ಲಿ ತೊಡಗಿದೆ ಎಂದು ಇ ಡಿ ದೂರಿದೆ.

Bar & Bench

ಆನ್‌ಲೈನ್ ನೈಜ ಹಣ ಗೇಮಿಂಗ್‌ ಗೇಮಿಂಗ್ ವೇದಿಕೆಗಳನ್ನು ತಿರುಚಿದ ಆರೋಪದಿಂದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮ್ಸ್‌ಕ್ರಾಫ್ಟ್ ಸಂಸ್ಥಾಪಕ ವಿಕಾಸ್ ತನೇಜಾ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಶುಕ್ರವಾರ ಐದು ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ.

ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ಜಾರಿ ನಿರ್ದೇಶನಾಲಯದ ರಿಮ್ಯಾಂಡ್‌ ಅರ್ಜಿ ಪುರಸ್ಕರಿಸಿ, ಮೇ 13ರವರೆಗೆ ತನೇಜಾ ಅವರನ್ನು ಕಸ್ಟಡಿಗೆ ನೀಡಿದ್ದಾರೆ.

ತನೇಜಾ ಅವರು ಗೇಮ್ಸ್‌ಕ್ರಾಫ್ಟ್‌ ಮತ್ತು ರಮ್ಮಿಕಲ್ಚರ್‌ ಟೆಕ್ನಾಲಜೀಸ್‌ಗಳ ನಿರ್ದೇಶಕರಾಗಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ ಸಾಫ್ಟ್‌ವೇರ್‌ ನಿರ್ವಹಣೆ ಮತ್ತು ಕನ್ಸಲ್ಟೆನ್ಸಿಗೆ ₹100 ಕೋಟಿ ವೆಚ್ಚ ಮಾಡಲಾಗಿದೆ ಎಂದು ತೋರಿಸಲಾಗಿದೆ ಎಂದು ಇಡಿ ಪ್ರಮುಖವಾಗಿ ಆರೋಪಿಸಿದೆ.

ಪೂರೈಕೆದಾರರು (ವೆಂಡರ್ಸ್‌) ಕಮಿಷನ್‌, ಜಿಎಸ್‌ಟಿ ಮತ್ತು ಟಿಡಿಎಸ್‌ ಕಳೆದು ಹಣವನ್ನು ನಗದಿನ ರೂಪದಲ್ಲಿ ಹಿಂದಿರುಗಿಸಿದ್ದಾರೆ. ದಾಖಲೆಗಳನ್ನು ಬಚ್ಚಿಟ್ಟಿರುವ ತನೇಜಾ ಬಹುಮುಖ್ಯವಾದ ವ್ಯಕ್ತಿಯಾಗಿದ್ದು, ಪಿಎಂಎಲ್‌ಎ ಕಾಯಿದೆ ಸೆಕ್ಷನ್‌ 3ರ ಅಡಿ ಅಪರಾಧ ಪ್ರಕ್ರಿಯೆ ಭಾಗವಾಗಿದ್ದಾರೆ ಎಂದು ಹೇಳಲಾಗಿದೆ.

2026ರಲ್ಲಿ ತೆಲಂಗಾಣದಲ್ಲಿ ಮೂರು ಎಫ್‌ಐಆರ್‌ ದಾಖಲಾಗಿದ್ದು, ಕಂಪನಿಯು ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ನಿರ್ವಹಿಸುತ್ತಿದೆ. ಆಟವನ್ನು ತಿರುಚಿ, ಬಳಕೆದಾರರಿಗೆ ವಂಚಿಸಲಾಗಿದೆ. ಆನಂತರ ನಕಲಿ ವೆಚ್ಚ ತೋರಿಸಿ, ಅದನ್ನು ನಗದಿನ ರೂಪದಲ್ಲಿ ವಾಪಸ್‌ ಪಡೆಯಲಾಗಿದೆ ಎಂದು ಇ ಡಿ ಆರೋಪಿಸಿದೆ.

ಕಂಪನಿಯು ರಮ್ಮಿ ಕಲ್ಚರ್‌, ರಮ್ಮಿ ಸರ್ಕಲ್‌ ಮತ್ತು ರಮ್ಮಿ ಟೈಮ್‌ ಎಂಬ ವೇದಿಕೆಗಳ ಮೂಲಕ ಮೋಸದ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಜನರನ್ನು ವಂಚಿಸುವ ಕೃತ್ಯದಲ್ಲಿ ತೊಡಗಿದೆ ಎಂದು ದೂರಲಾಗಿದೆ.

ತನೇಜಾ ಅಲ್ಲದೇ ದೀಪಕ್‌ ಸಿಂಗ್‌ ಮತ್ತು ಪೃಥ್ವಿರಾಜ್‌ ಸಿಂಗ್‌ ಅವರನ್ನು ಬಂಧಿಸಿದ್ದು, ಅವರನ್ನು ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ವಿಶೇಷ ಸರ್ಕಾರಿ ಅಭಿಯೋಜಕ ಡಿ ಎಂ ಮಹೇಶ್ವರಿ ಅವರು ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದರು. ತನೇಜಾ ಪರವಾಗಿ ವಕೀಲ ವಿ ಸಂಪ್ರೀತ್‌ ಹಾಜರಾಗಿದ್ದರು.