Sriki, ED ad Bengaluru City Civil Court 
ಸುದ್ದಿಗಳು

ಬಿಟ್‌ಕಾಯಿನ್‌ ಹಗರಣ: ಶ್ರೀಕಿ, ಸುನೀಶ್‌, ಖಂಡೇಲವಾಲ್‌ರನ್ನು 10 ದಿನ ಇ ಡಿ ಕಸ್ಟಡಿಗೆ ನೀಡಿದ ವಿಶೇಷ ನ್ಯಾಯಾಲಯ

ರಾಜ್ಯ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ಪೋರ್ಟಲ್‌ನಿಂದ ₹11.5 ಕೋಟಿ ಕದ್ದಿರುವುದು, ಗೇಮಿಂಗ್‌ ವೆಬ್‌ಸೈಟ್‌ಗಳ ಹ್ಯಾಕಿಂಗ್‌ & ವಿದೇಶದಲ್ಲಿ ಕ್ರಿಪ್ಟೊ ಕರೆನ್ಸಿ ಬದಲಾವಣೆ ಸಂಬಂಧಿಸಿದ ಪ್ರಕರಣವನ್ನು ಇ ಡಿಯು ತನಿಖೆ ನಡೆಸುತ್ತಿದೆ.

Bar & Bench

ಬಿಟ್‌ಕಾಯಿನ್‌ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಹ್ಯಾಕರ್‌ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ, ಸುನೀಶ್‌ ಹೆಗಡೆ ಮತ್ತು ರಾಬಿನ್‌ ಖಂಡೇಲವಾಲ್‌ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಹತ್ತು ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.

ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ಆರೋಪಿಗಳನ್ನು ಮೇ 19ರವರೆಗೆ ಇ ಡಿ ಕಸ್ಟಡಿಗೆ ನೀಡಿದ್ದಾರೆ.

ಬಂಧಿತರನ್ನು ಇಂದು ಬೆಳಿಗ್ಗೆ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ನ್ಯಾಯಾಧೀಶರ ಗೃಹ ಕಚೇರಿಯಲ್ಲಿ ಹಾಜರುಪಡಿಸಲಾಗಿತ್ತು. ವಿಚಾರಣೆಯ ವೇಳೆ ಶ್ರೀಕಿ ಪರ ವಕೀಲರು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ಆರೋಪಿಯು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಾದಿಸಿದರು. ಇದನ್ನು ಗಣನೆಗೆ ತೆಗೆದುಕೊಳ್ಳದ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಕೇಂದ್ರ ತನಿಖಾ ಸಂಸ್ಥೆಯ ಸುಪರ್ದಿಗೆ ನೀಡಿದ್ದಾರೆ.

ಕರ್ನಾಟಕ ಸರ್ಕಾರ ಇ-ಪ್ರಕ್ಯೂರ್‌ಮೆಂಟ್‌ ಪೋರ್ಟಲ್‌ನಿಂದ ₹11.5 ಕೋಟಿ ಕದ್ದಿರುವುದು, ಭಾರತದ ಗೇಮಿಂಗ್‌ ವೆಬ್‌ಸೈಟ್‌ಗಳ ಹ್ಯಾಕಿಂಗ್‌ ಮತ್ತು ವಿದೇಶದಲ್ಲಿ ಕ್ರಿಪ್ಟೊ ಕರೆನ್ಸಿ ಬದಲಾವಣೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇ ಡಿಯು ತನಿಖೆ ನಡೆಸುತ್ತಿದೆ.

ಇತ್ತೀಚೆಗೆ ಶ್ರೀಕಿ ಸ್ನೇಹಿತ ಎನ್ನಲಾದ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಮನೆಯಲ್ಲಿಯೂ ಇ ಡಿ ಶೋಧ ನಡೆಸಿತ್ತು. ಯುನೋಕಾಯಿನ್‌ ಹ್ಯಾಕಿಂಗ್‌ ಮತ್ತು ಕದ್ದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿಯು ಶ್ರೀಕಿ ಮತ್ತಿತರರ ವಿರುದ್ಧ ತನಿಖೆ ನಡೆಸಿತ್ತು.

ಗೇಮಿಂಗ್‌ ವೆಬ್‌ಸೈಟ್‌ಗಳ ಹ್ಯಾಕಿಂಗ್‌ ಮತ್ತು ಬಿಟ್‌ ಕಾಯಿನ್‌ ಬಳಸಿ ಡಾರ್ಕ್‌ನೆಟ್‌ ಮೂಲಕ ಮಾದಕ ದ್ರವ್ಯ ತರಿಸಿದ ಆರೋಪದ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಹಿರಿಯ ಐಪಿಎಸ್‌ ಅಧಿಕಾರಿ ಮನೀಷ್‌ ಖರ್ಬೀಕರ್‌ ನೇತೃತ್ವದಲ್ಲಿ ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ಎಸ್‌ಐಟಿ ನೇಮಿಸಿತ್ತು.

ಆನಂತರ 2024ರ ಜುಲೈನಲ್ಲಿ ಶ್ರೀಕಿ ಮತ್ತು ಖಂಡೇಲವಾಲಾ ವಿರುದ್ಧ ದಾಖಲಾಗಿರುವ ಕೋಕಾ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಈ ಇಬ್ಬರೂ 2020ರಲ್ಲಿ ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.