ಸುದ್ದಿಗಳು

ಸಂತ್ರಸ್ತೆ ಅಪಹರಣ ಪ್ರಕರಣ: ಶಾಸಕ ರೇವಣ್ಣ ಅವರನ್ನು ಮೂರು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿದ ನ್ಯಾಯಾಧೀಶರು

ರೇವಣ್ಣ ಅವರನ್ನು ಕೋರಮಂಗಲದಲ್ಲಿರುವ ಹದಿನೇಳನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಎಂ ಕಟ್ಟೀಮನಿ ಅವರ ನಿವಾಸದಲ್ಲಿ ಎಸ್ಐಟಿ ಹಾಜರುಪಡಿಸಿತು.

Bar & Bench

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರನ್ನು ಬೆಂಗಳೂರು ನ್ಯಾಯಾಲಯದ ನ್ಯಾಯಾಧೀಶರು  ಮೂರು  ದಿನಗಳ ಕಾಲ ಸಿಐಡಿ ಎಸ್‌ಐಟಿ (ವಿಶೇಷ ತನಿಖಾ ತಂಡದ) ವಶಕ್ಕೆ ನೀಡಿದ್ದಾರೆ.

ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಪುತ್ರ ಹಾಗೂ ಜೆಡಿಎಸ್‌ ನಾಯಕರಾಗಿರುವ ರೇವಣ್ಣ ಅವರನ್ನು ಕೋರಮಂಗಲದಲ್ಲಿರುವ ಹದಿನೇಳನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್‌ ಎಂ ಕಟ್ಟೀಮನಿ ಅವರ ನಿವಾಸದಲ್ಲಿ ಎಸ್‌ಐಟಿ ಹಾಜರುಪಡಿಸಿತು.

ವಿಚಾರಣೆ ವೇಳೆ ಐದು ದಿನಗಳ ಕಾಲ ರೇವಣ್ಣ ಅವರನ್ನು ವಶಕ್ಕೆ ನೀಡಬೇಕೆಂದು ಕೋರಿ ರಿಮ್ಯಾಂಡ್‌ ಅರ್ಜಿ ಸಲ್ಲಿಸಿದ ಎಸ್‌ಐಟಿ "ಇದೊಂದು ಗಂಭೀರ ಪ್ರಕರಣ. ರೇವಣ್ಣ ಅವರು ಮಾಜಿ ಸಚಿವರಾಗಿದ್ದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ" ಎಂದಿತು.

ಇತ್ತ ರೇವಣ್ಣ ಪರ ವಕೀಲರ ಮೂರ್ತಿ ಡಿ ನಾಯಕ್‌ ಅವರು ಅಪಹರಣ ಪ್ರಕರಣಕ್ಕೂ ರೇವಣ್ಣನವರಿಗೂ ಯಾವುದೇ ಸಂಬಂಧ ಇಲ್ಲ. ಸಂತ್ರಸ್ತೆ ಈಗಾಗಲೇ ದೊರೆತಿದ್ದಾರೆ. ರೇವಣ್ಣನವರ ಪಾತ್ರದ ಬಗ್ಗೆ ಎಸ್‌ಐಟಿ ಕೂಡ ಏನನ್ನೂ ತಿಳಿಸಿಲ್ಲ. ಯಾವುದೇ ಸಾಕ್ಷ್ಯ ನಾಶ ಮಾಡುವುದಿಲ್ಲ ಎಂದರು.

ಇದನ್ನು ಬಲವಾಗಿ ವಿರೋಧಿಸಿದ ಎಸ್‌ಐಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೈದು ಅಂಶಗಳನ್ನು ಪ್ರಸ್ತಾಪಿಸಿತು. ಈ ಹಿನ್ನೆಲೆಯಲ್ಲು ರೇವಣ್ಣನವರನ್ನು ತನ್ನ ವಶಕ್ಕೆ ನೀಡಬೇಕೆಂದು ಮನವಿ ಮಾಡಿತು.   

ವಾದ ಆಲಿಸಿದ ನ್ಯಾಯಾಧೀಶರು ಮೇ 8ರವರೆಗೆ ಎಸ್‌ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು.  

ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ದೇವೇಗೌಡರ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಕೂಡಲೇ ಬಂಧಿಸಲಾಗಿತ್ತು.

ನಿನ್ನೆ ಎಸ್‌ಐಟಿ ಕಚೇರಿಯಲ್ಲಿದ್ದ ಅವರನ್ನು ಇಂದು (ಭಾನುವಾರ ಸಂಜೆ) ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆ ಬಳಿಕ  ನ್ಯಾಯಾಧೀಶರೆದುರು ಹಾಜರುಪಡಿಸಲಾಗಿತ್ತು.