ಬೆಂಗಳೂರು ಮೆಟ್ರೋ ರೈಲಿನ ಟಿಕೆಟ್ ದರ ಹೆಚ್ಚಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ಧಾರಣಿ ನೇತೃತ್ವದ ದರ ನಿಗದಿ ಸಮಿತಿ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸುವ ಕುರಿತು ತನ್ನ ನಿಲುವು ತಿಳಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ಧಾರಣಿ ನೇತೃತ್ವದ ದರ ನಿಗದಿ ಸಮಿತಿ ಸಲ್ಲಿಸಿರುವ ವರದಿ ಬಹಿರಗಂಪಡಿಸಲು ಆದೇಶಿಸುವಂತೆ ಕೋರಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಪೀಠವು ಈ ನಿರ್ದೇಶನ ನೀಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, "ಅರ್ಜಿಗೆ ಬಿಎಂಆರ್‌ಸಿಎಲ್ ಆಕ್ಷೇಪಣೆ ಸಲ್ಲಿಸಿದೆ. ದರ ನಿಗದಿ ಸಮಿತಿ ವರದಿಯನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲು ಜುಲೈನಲ್ಲಿ ರಾಜ್ಯ ಸರ್ಕಾರವು ತನಗೆ ಅನುಮತಿ ನೀಡಿದೆ ಎಂಬುದಾಗಿ ಉಲ್ಲೇಖಿಸಿದೆ. ಆದರೆ, ಇನ್ನೂ ವರದಿಯನ್ನು ಈವರೆಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ" ಎಂದು ಪೀಠದ ಗಮನಕ್ಕೆ ತಂದರು.
ಇದನ್ನು ಪರಿಗಣಿಸಿದ ಪೀಠವು, ನ್ಯಾ. ಧಾರಣಿ ನೇತೃತ್ವದ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಪಡಿಸುವ ಕುರಿತು ನಿಲುವು ತಿಳಿಸುವಂತೆ ಬಿಎಂಆರ್‌ಸಿಎಲ್ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತು.
ಬಿಎಂಆರ್‌ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿದೆ. ಇದರಿಂದ ದರ ಏರಿಕೆ ಸಂಬಂಧಿಸಿದಂತೆ ನ್ಯಾ.ಧಾರಣಿ ನೇತೃತ್ವದ ದರ ನಿಗದಿ ಸಮಿತಿಯ ವರದಿ ಬಹಿರಂಗ ಪಡಿಸುವುದು ಅದರ ಕರ್ತ್ಯವ್ಯ ಎಂದು ಅರ್ಜಿದಾರರು ವಾದಿಸಿದ್ದಾರೆ.
ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೋ ನಿಗಮಗಳು ವರದಿ ಬಹಿರಂಗಪಡಿಸಿವೆ. ಅದೇ ರೀತಿ 2025ರ ಏಪ್ರಿಲ್ ತಿಂಗಳಿನಿಂದ ಮೂರು ಬಾರಿ ಮನವಿ ಮಾಡಿದರೂ ಬಿಎಂಆರ್‌ಸಿಎಲ್ ಮಾತ್ರ ವರದಿ ಬಹಿರಂಗ ಪಡಿಸಿಲ್ಲ. ಆದ್ದರಿಂದ ವರದಿ ಬಹಿರಂಗ ಪಡಿಸಲು ಬಿಎಂಆರ್‌ಸಿಎಲ್‌ಗೆ ಸೂಚಿಸುವಂತೆ ಅರ್ಜಿದಾರರು ಕೋರಿದ್ದಾರೆ.