Shiladitya Bose and karnataka hc 
ಸುದ್ದಿಗಳು

ರಸ್ತೆಯಲ್ಲಿ ಹೊಡೆದಾಟ: ಐಎಎಫ್‌ ಅಧಿಕಾರಿ ಶಿಲಾದಿತ್ಯ ವಿರುದ್ದ ಬಲವಂತ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ಪೊಲೀಸರು ಶಿಲಾದಿತ್ಯ ಬೋಸ್‌ರನ್ನು ಕಾನೂನು ಪರಿಪಾಲಿಸದೇ ವಿಚಾರಣೆಗೆ ಹಾಜರಾಗಲು ಸೂಚಿಸಬಾರದು. ಬೋಸ್‌ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಆದೇಶಿಸಿರುವ ಪೀಠ.

Bar & Bench

ರಾಷ್ಟ್ರಮಟ್ಟದಲ್ಲಿ ಚರ್ಚೆ ಗ್ರಾಸವಾಗಿದ್ದ ಬೆಂಗಳೂರಿನ ರಸ್ತೆಯೊಂದರಲ್ಲಿ ಈಚೆಗೆ ನಡೆದಿದ್ದ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕೊಲೆ ಯತ್ನ ಪ್ರಕರಣದಲ್ಲಿ ಭಾರತೀಯ ವಾಯುಸೇನೆಯ (ಐಎಎಫ್‌) ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ರಾಜ್ಯ ಪೊಲೀಸರಿಗೆ ಆದೇಶಿಸಿರುವ ಹೈಕೋರ್ಟ್, ಇದೇ ವೆಳೆ ತನಿಖೆಗೆ ಸಹಕರಿಸುವಂತೆ ಬೋಸ್‌ಗೆ ಸೂಚಿಸಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಆನಂತರದ ನ್ಯಾಯಿಕ ಪ್ರಕ್ರಿಯೆ ರದ್ದತಿ ಕೋರಿ ಪಶ್ಚಿಮ ಬಂಗಾಳದ ಐಎಎಫ್‌ ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.

ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಅವರ ವಾದ ಆಲಿಸಿದ ಪೀಠವು ಬೈಯಪ್ಪನಹಳ್ಳಿ ಪೊಲೀಸರು ಶಿಲಾದಿತ್ಯ ಬೋಸ್‌ ವಿರುದ್ದ ಬಲವಂತದ ಕ್ರಮಕೈಗೊಳ್ಳಬಾರದು. ಕಾನೂನು ಪರಿಪಾಲಿಸದೇ ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಆದೇಶಿಸಿತು.

ಬೈಯಪ್ಪನಹಳ್ಳಿ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ದೂರುದಾರ ಎಸ್‌ ಜೆ ವಿಕಾಸ್‌ ಕುಮಾರ್‌ಗೆ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ.

ಬೆಂಗಳೂರಿನ 26 ವರ್ಷದ ಎಸ್‌ ಜೆ ವಿಕಾಸ್‌ ಕುಮಾರ್‌ ನೀಡಿದ ದೂರಿನ ಅನ್ವಯ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು ಶಿಲಾದಿತ್ಯ ಬೋಸ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 109 (ಕೊಲೆ ಯತ್ನ), 115(2) (ಸ್ವಇಚ್ಛೆಯಿಂದ ಹಾನಿ ಮಾಡುವುದು), 304 (ಕಳವು ಮಾಡಲು ಮುಂದಾಗುವುದು), 324 (ಕಿರುಕುಳ), 351 (ಬೆದರಿಕೆ), 352 (ಶಾಂತಿಗೆ ಭಂಗ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ.

ಶಿಲಾದಿತ್ಯ ವೈದ್ಯಕೀಯ ತುರ್ತಿನ ಹಿನ್ನೆಲೆಯಲ್ಲಿ ಕೋಲ್ಕತ್ತಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸಿ ವಿ ರಾಮನ್‌ ನಗರದಲ್ಲಿ ವಾಹನ ತಗುಲಿದ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ವಿಕಾಸ್‌ ಮತ್ತು ಶಿಲಾದಿತ್ಯ ಬೋಸ್‌ ನಡುವೆ ಜಗಳ ಆರಂಭವಾಗಿ, ಹೊಡೆದಾಟ ನಡೆದಿತ್ತು. ಈ ಸಂದರ್ಭದಲ್ಲಿ ಬೋಸ್‌ ಪತ್ನಿ ವಾಹನ ಚಲಾಯಿಸುತ್ತಿದ್ದರು. ಘಟನೆಯ ಬಳಿಕ ಬೋಸ್‌ ಪತ್ನಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಿಗೇ ಬೋಸ್‌ ಅವರು ವಿಕಾಸ್‌ ಕುಮಾರ್‌ ಕನ್ನಡದಲ್ಲಿ ತನ್ನನ್ನು ನಿಂದಿಸಿ ಬೈಕ್‌ ಕೀ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಹರಿಬಿಟ್ಟು ಪ್ರಕರಣಕ್ಕೆ ತಿರುವು ನೀಡಿದ್ದರು.

ಆರಂಭದಲ್ಲಿ ಪೊಲೀಸರು ವಿಕಾಸ್‌ ಕುಮಾರ್‌ ಬಂಧಿಸಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ, ಘಟನೆಯ ಕುರಿತಾದ ಸಿಸಿಟಿವಿ ತುಣುಕು ಪರಿಶೀಲಿಸಿ, ಸಮೀಪದಲ್ಲಿದ್ದವರಿಂದ ಮಾಹಿತಿ ಪಡೆಯಲಾಗಿ, ಬೋಸ್‌ ಅವರೇ ವಿಕಾಸ್‌ ಮೇಲೆ ಹಲ್ಲೆ ನಡೆಸಿ, ಆತ ಕೆಳಗೆ ಬಿದ್ದಾಗ ಒದ್ದಿದ್ದಾರೆ ಎಂಬ ವಿಚಾರ ಬಹಿರಂಗವಾಗಿತ್ತು. ಈ ಸಂಬಂಧದ ಎರಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.