H D Devegowda, C M Ibrahim and H D Kumaraswamy, Bengaluru City civil court 
ಸುದ್ದಿಗಳು

ಜೆಡಿಎಸ್‌ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ: ಸಿ ಎಂ ಇಬ್ರಾಹಿಂ ಅರ್ಜಿ ವಜಾ ಮಾಡಿದ ಬೆಂಗಳೂರಿನ ಸತ್ರ ನ್ಯಾಯಾಲಯ

ಸಿ ಎಂ ಇಬ್ರಾಹಿಂ ಸಲ್ಲಿಸಿದ್ದ ಮೂಲ ದಾವೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ಶಿವಪುತ್ರ ಕುಜ್ಜಿ ಅವರು ವಜಾ ಮಾಡಿದ್ದಾರೆ.

Bar & Bench

ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿ ತನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲಾಗಿದೆ ಮತ್ತು ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್‌ ಡಿ ಕುಮಾರಸ್ವಾಮಿ ಅವರನ್ನು ನೇಮಿಸಲಾಗಿದೆ ಎಂದು ಆಕ್ಷೇಪಿಸಿ ಉಚ್ಚಾಟಿತ ಅಧ್ಯಕ್ಷ ಸಿ ಎಂ ಇಬ್ರಾಹಿಂ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸತ್ರ ನ್ಯಾಯಾಲಯವು ಶುಕ್ರವಾರ ವಜಾ ಮಾಡಿದೆ.

ಸಿ ಎಂ ಇಬ್ರಾಹಿಂ ಸಲ್ಲಿಸಿದ್ದ ಮೂಲ ದಾವೆಯನ್ನು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ಶಿವಪುತ್ರ ಕುಜ್ಜಿ ಅವರು ವಜಾ ಮಾಡಿದ್ದಾರೆ.

“ಹಾಲಿ ರೂಪದಲ್ಲಿ ಫಿರ್ಯಾದಿ ಇಬ್ರಾಹಿಂ ಅವರು ಸಲ್ಲಿಸಿರುವ ದೂರನ್ನು ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಅಂದರೆ 03-08-2022ರಂದು ಜೆಡಿಎಸ್‌ ಅಧ್ಯಕ್ಷರಾಗಿ ತನ್ನನ್ನು ರಾಜ್ಯ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿತ್ತು. ಎಚ್‌ ಡಿ ದೇವೇಗೌಡ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರು 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಸಕಾರಣವಿಲ್ಲದೇ ತಮ್ಮನ್ನು 16-11-2023ರಂದು ಪಕ್ಷದಿಂದ ಉಚ್ಚಾಟಿಸಿದ್ದಾರೆ ಎಂದು ಇಬ್ರಾಹಿಂ ಆಕ್ಷೇಪಿಸಿದ್ದಾರೆ.

ಪ್ರತಿವಾದಿಗಳ ಈ ನಡೆಯು ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಪಕ್ಷದ ನಿಯಮಗಳನ್ನು ಪಾಲಿಸಲಾಗಿಲ್ಲ. ಈ ನೆಲೆಯಲ್ಲಿ ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಇಬ್ರಾಹಿಂ ಅರ್ಜಿಯಲ್ಲಿ ಕೋರಿದ್ದರು.