Darshan & Vijayalakshmi 
ಸುದ್ದಿಗಳು

ನಟ ದರ್ಶನ್‌, ಪತ್ನಿ ವಿಜಯಲಕ್ಷ್ಮಿ ಜೀವನ, ರೇಣುಕಾಸ್ವಾಮಿ ಕೊಲೆ ಆಧಾರಿತ ʼಬಾಸ್‌ʼ ಚಿತ್ರ ಬಿಡುಗಡೆಗೆ ನ್ಯಾಯಾಲಯ ತಡೆ

ದರ್ಶನ್‌ & ವಿಜಯಲಕ್ಷ್ಮಿ ಜೀವನ, ರೇಣುಕಾಸ್ವಾಮಿ ಕೊಲೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಫಿರ್ಯಾದಿಗಳ ಖಾಸಗಿ ಜೀವನ, ಕುಟುಂಬ, ಘನತೆ, ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುವ ಕ್ರಿಮಿನಲ್‌ ಪ್ರಕರಣದ ವಸ್ತು ಬಳಕೆ ಮಾಡಕೂಡದು ಎಂದು ಕೋರಲಾಗಿದೆ.

Bar & Bench

ನಟ ದರ್ಶನ್‌ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಜೀವನ ಮತ್ತು ರೇಣುಕಾಸ್ವಾಮಿ ಕೊಲೆ ಆಧಾರಿತ ಎನ್ನಲಾದ ʼಬಾಸ್‌ʼ ಸಿನಿಮಾವನ್ನು ಚಿತ್ರಮಂದಿರ ಅಥವಾ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡದಂತೆ ಸಿರಿ ಪ್ರೊಡಕ್ಷನ್ಸ್‌ ಮತ್ತು ವಿ ಲಾವಾದ ನಿರ್ಮಾಪಕರು, ನಿರ್ದೇಶಕರು ಅವರ ಸಂಬಂಧಿತರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ನಿರ್ದೇಶಿಸಿದೆ.

ದರ್ಶನ್‌ ಶ್ರೀನಿವಾಸ್‌ ಮತ್ತು ವಿಜಯಲಕ್ಷ್ಮಿ ದರ್ಶನ್‌ ಸಲ್ಲಿಸಿರುವ ಅಸಲು ದಾವೆಯ ವಿಚಾರಣೆಯನ್ನು 17ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶೆ ಎಂ ಅನಿತಾ ಅವರು ವಿಚಾರಣೆ ನಡೆಸಿದರು.

ದರ್ಶನ್‌ ಮತ್ತು ವಿಜಯಲಕ್ಷ್ಮಿ ಅವರ ಜೀವನ, ರೇಣುಕಾಸ್ವಾಮಿ ಕೊಲೆ ಪ್ರಕರಣ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಫಿರ್ಯಾದಿಗಳ ಖಾಸಗಿ ಜೀವನ, ಕುಟುಂಬ, ಘನತೆ, ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುವ ಕ್ರಿಮಿನಲ್‌ ಪ್ರಕರಣ ಅಥವಾ ಇನ್ನಾವುದೇ ರೀತಿಯಲ್ಲಿ ಫಿರ್ಯಾದಿಗಳ ವರ್ಚಸ್ಸು, ಇಚ್ಛೆ, ವ್ಯಕ್ತಿತ್ವದ ಹಕ್ಕುಗಳು ಅಥವಾ ಪ್ರಚಾರದ ಅಂಶಗಳನ್ನು ಒಳಗೊಂಡಿರುವ ʼಬಾಸ್‌ʼ ಚಿತ್ರದ ನಿರ್ಮಾಣ, ಚಿತ್ರೀಕರಣ, ಸಂಕಲನ, ಪ್ರಚಾರ, ಮಾರ್ಕೆಟಿಂಗ್‌, ಬಿಡುಗಡೆ, ಹಂಚಿಕೆ, ಸ್ಟ್ರೀಮಿಂಗ್‌, ಮಾರಾಟ, ಪರವಾನಗಿಯನ್ನು ಸಿನಿಮಾ ಅಥವಾ ಓಟಿಟಿ ವೇದಿಕೆಯಲ್ಲಿ ಮುಂದಿನ ವಿಚಾರಣೆವರೆಗೆ ಬಳಕೆ ಮಾಡಕೂಡದು. ಪೋಸ್ಟರ್‌, ಟೀಸರ್‌, ಮಾಧ್ಯಮ ಗೋಷ್ಠಿ, ಸಂದರ್ಶನ ಇತ್ಯಾದಿ ಕಡೆ ಫಿರ್ಯಾದಿಗಳ ಉಲ್ಲೇಖ ಮಾಡಕೂಡದು. ಒದು ಸಿನಿಮಾ/ವೆಬ್‌ ಸರಣಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಸಿರಿ ಪ್ರೊಡಕ್ಷನ್ಸ್‌, ವಿ ಲಾವಾ, ಸಿಬಿಎಫ್‌ಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಮೆಟಾ/ಫೇಸ್‌ಬುಕ್‌, ಎಕ್ಸ್‌ ಕಾರ್ಪ್‌, ಗೂಗಲ್‌, ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ಫಿಲ್ಮಿ ಬೀಟ್‌, ಟಿವಿ೦ ಕನ್ನಡ, ಜೀ ಕನ್ನಡ ನ್ಯೂಸ್‌ ಅಶೋಕ್‌ ಕುಮಾರ್‌ ಅಚರಿಗೆ ಸಮನ್ಸ್‌ ಮತ್ತು ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ. ಏಪ್ರಿಲ್‌ 14ಕ್ಕೆ ಬಾಸ್‌ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿತ್ತು ಎನ್ನಲಾಗಿದೆ.