ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅಲಿಯಾಸ್ ಬಿ ಎಸ್ ಸುರೇಶ್ ಅವರ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡಿದಂತೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯವು ಶನಿವಾರ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥ್ ಅವರು ಹಲವು ಬಾರಿ ಮಾಧ್ಯಮಗೋಷ್ಠಿಯಲ್ಲಿ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಸಚಿವ ಸುರೇಶ್ ಅವರು ವಿಶ್ವನಾಥ್‌ರಿಂದ 50 ಕೋಟಿ ಪರಿಹಾರದ ಜೊತೆಗೆ ಯಾವುದೇ ಮಾನಹಾನಿ ನೀಡದಂತೆ ಶಾಶ್ವತ ಪ್ರತಿಬಂಧಕಾದೇಶ ಹೊರಡಿಸಲು ಕೋರಿ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿರುವ ಮಧ್ಯಂತರ ಅರ್ಜಿಯನ್ನು 40ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎನ್ ವೀಣಾ ಅವರು ಪುರಸ್ಕರಿಸಿದ್ದಾರೆ.
“ವಿಶ್ವನಾಥ್ ಅವರು ಫಿರ್ಯಾದಿ ಸುರೇಶ್ ಅವರ ವಿರುದ್ಧ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾನಹಾನಿ ಹೇಳಿಕೆ ನೀಡದಂತೆ ಏಕಪಕ್ಷಕೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಲಾಗಿದೆ. ಈ ಆದೇಶವು ಮುಂದಿನ ವಿಚಾರಣೆವರೆಗೆ ಜಾರಿಯಲ್ಲಿರಲಿದೆ” ಎಂದು ನ್ಯಾಯಾಲಯವು ಆದೇಶಿಸಿದೆ. ವಿಶ್ವನಾಥ್ ಅವರಿಗೆ ದಾವೆಯ ಸಮನ್ಸ್ ಮತ್ತು ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ.
“ಸಾರ್ವಜನಿಕ ವಿಚಾರದ ನೆಪದಲ್ಲಿ ಸುರೇಶ್ ವಿರುದ್ಧ ವಿಶ್ವನಾಥ್ ಅವರು ವೈಯಕ್ತಿಕ ಹೇಳಿಕೆ ನೀಡಿರುವುದು ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬಂದಿದೆ. ವಿಶ್ವನಾಥ್ ಅವರು ಸುರೇಶ್ ಅವರ ಮಾನಹಾನಿ ಮಾಡಿದ್ದು, ಸುರೇಶ್ ಘನತೆಗೆ ಹಾನಿ ಮಾಡುವುದು ವಿಶ್ವನಾಥ್ ಉದ್ದೇಶವಾಗಿದೆ. ದಾಖಲೆಗಳನ್ನು ವಿಶ್ಲೇಷಿಸಿದಾಗ ಇದು ಮಧ್ಯಂತರ ಪ್ರತಿಬಂಧಕಾದೇಶ ಮಾಡಲು ಸೂಕ್ತ ಪ್ರಕರಣವಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇಲ್ಲವಾದಲ್ಲಿ ದಾವೆ ಇತ್ಯರ್ಥವಾಗುವವರೆಗೆ ಪರಿಸ್ಥಿತಿ ಸರಿಪಡಿಸಲಾಗದಷ್ಟು ಹದಗೆಡಲಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಸುರೇಶ್ ಪರ ವಕೀಲ ಶತಭಿಷ್ ಶಿವಣ್ಣ ಅವರು “ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ ಎಂಬುದು ಸೇರಿದಂತೆ ಹಲವು ಆಕ್ಷೇಪಾರ್ಹ ಹೇಳಿಕೆಗಳನ್ನು ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಈ ಮೂಲಕ ತಮ್ಮ ಕಕ್ಷಿದಾರರ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ. ಲೀಗಲ್ ನೋಟಿಸ್ ನೀಡಿದ ಬಳಿಕವೂ ವಿಶ್ವನಾಥ್ ಅವರು ಮಾನಹಾನಿ ಹೇಳಿಕೆ ನೀಡಿದ್ದಾರೆ” ಎಂದು ವಾದಿಸಿದರು.