Ranya Rao 
ಸುದ್ದಿಗಳು

ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಜಾಮೀನು ನಿರಾಕರಿಸಿದ ಬೆಂಗಳೂರಿನ ಸತ್ರ ನ್ಯಾಯಾಲಯ

ಮಾರ್ಚ್‌ 14ರಂದು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ರನ್ಯಾಗೆ ಜಾಮೀನು ನಿರಾಕರಿಸಿತ್ತು.

Bar & Bench

ಕೋಟ್ಯಂತರ ರೂಪಾಯಿ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ಹರ್ಷವರ್ದಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ಗೆ ಗುರುವಾರ ಬೆಂಗಳೂರಿನ ಸತ್ರ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಎರಡು ವಾರಗಳ ಹಿಂದೆ ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ರನ್ಯಾ ಜಾಮೀನು ಅರ್ಜಿ ತಿರಸ್ಕರಿಸಿತ್ತು.

ವಾದ-ಪ್ರತಿವಾದ ಆಲಿಸಿ, ಮಂಗಳವಾರ ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ಬೆಂಗಳೂರಿನ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಈರಪ್ಪಣ್ಣ ಪವಡಿ ನಾಯ್ಕ್‌ ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ರನ್ಯಾ ಪರ ಹಿರಿಯ ವಕೀಲ ಕಿರಣ್‌ ಜವಳಿ ಅವರು “ಬಂಧಿಸಿದ ಬಳಿಕ ರನ್ಯಾಗೆ ಏಕೆ ಬಂಧಿಸಲಾಗುತ್ತಿದೆ ಎಂಬ ಮೆಮೊ ನೀಡಲಾಗಿಲ್ಲ. ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 102ರ ಗೆಜೆಟೆಡ್‌ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಶೋಧ ನಡೆಸಬೇಕಿತ್ತು. ಆದರೆ, ಅದನ್ನು ಅನುಪಾಲಿಸಲಾಗಿಲ್ಲ. ಆರೋಪಿತ ಅಪರಾಧವು ಜೀವಾವಧಿ ಅಥವಾ ಮರಣ ದಂಡನೆ ವಿಧಿಸುವ ಶಿಕ್ಷೆಯಾಗಿಲ್ಲವಾದ್ದರಿಂದ ಬಿಎನ್‌ಎಸ್‌ಎಸ್‌ ಸೆಕ್ಷನ್‌ 480, ಉಪ ಸೆಕ್ಷನ್‌ 1ರ ಅಡಿ ಮಹಿಳೆಯಾಗಿರುವುದರಿಂದ ಬಿಡುಗಡೆ ಮಾಡಬೇಕು" ಎಂದು ವಾದಿಸಿದರು.

ಡಿಆರ್‌ಐ ಪ್ರತಿನಿಧಿಸಿದ್ದ ವಕೀಲ ಮಧು ಎನ್.ರಾವ್‌ ಅವರು “ರನ್ಯಾ ಎಸಗಿರುವ ಅಪರಾಧಕ್ಕೆ ಏಳು ವರ್ಷ ಜೈಲು ಮತ್ತು ದಂಡ ವಿಧಿಸಬಹುದಾಗಿದೆ. ಆರೋಪಿತ ಅಪರಾಧವು ಭಾರತದ ಆರ್ಥಿಕತೆಗೆ ಹೊಡೆತ ನೀಡಲಿದ್ದು, ರಾಷ್ಟ್ರದ ಭದ್ರತೆ ಅಪಾಯ ಉಂಟು ಮಾಡಲಿದೆ. ಚಿನ್ನ ಕಳ್ಳ ಸಾಗಣೆಯಂಥ ಕೃತ್ಯವು ಸಾರ್ವಜನಿಕ ನಿಧಿಗೆ ನಷ್ಟ ಉಂಟು ಮಾಡುವ ಪ್ರಕರಣವಾಗಿದ್ದು, ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 104ರ ಅಡಿ ನಿಯಮಬದ್ಧವಾಗಿ ಆಕೆಯನ್ನು ಬಂಧನ ಪ್ರಕ್ರಿಯೆ ನಡೆಸಲಾಗಿದೆ. ರನ್ಯಾ ಬಳಿ ಯುಎಇ ನಿವಾಸಿ ಕಾರ್ಡ್‌ ಇದ್ದು, ಆಕೆಗೆ ಜಾಮೀನು ನೀಡಿದರೆ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ” ಎಂದರು.

ಮಾರ್ಚ್‌ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾಳನ್ನುಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್‌ ಬ್ಯಾಗ್)‌ ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್‌ ಅಡೆಸೀವ್‌ ಬ್ಯಾಂಡೇಜ್‌ ಬಳಿ ಅಂಟಿಸಲಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್‌ ಕಾಯಿದೆ 1962ರ ಸೆಕ್ಷನ್‌ 135(1)(i) ಅಡಿ ರನ್ಯಾಳನ್ನು ಬಂಧಿಸಲಾಗಿತ್ತು.