ಕೋವಿಡ್ ಮೊದಲ ಮತ್ತು ಎರಡನೆಯ ಅಲೆಯಿಂದಾಗಿ ಹಲವು ಕೆಲಸದ ದಿನಗಳು ನಷ್ಟವಾಗಿರುವುದರಿಂದ ರಾಜ್ಯದಾದ್ಯಂತ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಸೂಕ್ತ ಹೈಬ್ರಿಡ್ ವಿಚಾರಣಾ ವ್ಯವಸ್ಥೆ ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ, “… ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಸರಿಯಾದ ಹೈಬ್ರಿಡ್ ವಿಚಾರಣಾ ವ್ಯವಸ್ಥೆಯನ್ನು ಒದಗಿಸುವ ಅವಶ್ಯಕತೆಯಿದೆ. ಮೊದಲ ಮತ್ತು ಎರಡನೆಯ ಅಲೆಯಿಂದಾಗಿ ನ್ಯಾಯಾಲಯದ ವಿಚಾರಣೆಗಳಲ್ಲಿ ಅಡಚಣೆ ಉಂಟಾಗಿದೆ. ಪ್ರಕರಣಗಳು ಬಾಕಿ ಉಳಿಯಲು ಲಾಕ್‌ಡೌನ್ ಹಾದಿ ಮಾಡಿಕೊಟ್ಟಿದೆ… ಇಡೀ ನ್ಯಾಯಾಂಗ ವ್ಯವಸ್ಥೆ ಮೂರನೇ ಅಲೆ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರಬೇಕು. ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಸೂಕ್ತ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸಿಂಗ್ ವಿಚಾರಣಾ ವ್ಯವಸ್ಥೆ ಇರಬೇಕು” ಎಂದಿತು.
ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಬಳಸುವ ಜೂಮ್ ಅಪ್ಲಿಕೇಷನ್‌ನ ಪರವಾನಗಿ ಹೊಂದಿರುವ ಆವೃತ್ತಿಗಳಿಗೆ ಎಲ್ಲ ನ್ಯಾಯಾಲಯಗಳು ಚಂದಾದಾರರಾಗುವುದು ಅವಶ್ಯಕ ಎಂದು ಇದೇ ವೇಳೆ ನ್ಯಾಯಾಲಯ ತಿಳಿಸಿದೆ.
ವೀಡಿಯೊ ವಿಚಾರಣೆಗಳನ್ನು ನಡೆಸುವಾಗ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಎದುರಿಸುತ್ತಿರುವ ವಿವಿಧ ತೊಂದರೆಗಳನ್ನು ಅಮಿಕಸ್ ಕ್ಯೂರಿ ಗಮನಸೆಳೆದ ನಂತರ ನ್ಯಾಯಾಲಯ ಈ ನಿರ್ದೇಶನ ನೀಡಲು ಮುಂದಾಯಿತು. ಅಧೀನ ನ್ಯಾಯಾಲಯಗಳು ಜಿಟ್ಸಿ ಅಪ್ಲಿಕೇಷನ್ ಬಳಸುತ್ತಿರುವುದಾಗಿ ರಿಜಿಸ್ಟ್ರಾರ್ ಜನರಲ್ ವರದಿ ಈ ಹಿಂದೆ ತಿಳಿಸಿತ್ತು. ಆದರೆ ಈ ಅಪ್ಲಿಕೇಷನ್‌ಗೆ ತುಸು ಹೆಚ್ಚು ಬ್ಯಾಂಡ್ವಿಡ್ತ್ ಅಗತ್ಯವಿದೆ. ಉತ್ತಮ ಸಿಗ್ನಲ್ ಸಾಮರ್ಥ್ಯ ಇರುವ ಸ್ಥಳಗಳಿಂದ ವಿಚಾರಣೆಯಲ್ಲಿ ದಾವೆದಾರರು ಮತ್ತು ವಕೀಲರು ಭಾಗವಹಿಸದಿದ್ದರೆ ತಾಂತ್ರಿಕ ತೊಂದರೆಗಳು ಏಳುತ್ತವೆ” ಎಂದು ನ್ಯಾಯಾಲಯ ತಿಳಿಸಿತು. ಈ ಸಮಸ್ಯೆಯನ್ನು ನಿವಾರಿಸಲು, ಜೂಮ್ ಅಪ್ಲಿಕೇಶನ್‌ನ ಪರವಾನಗಿ ಪಡೆದ ಆವೃತ್ತಿಗಳಿಗೆ ನ್ಯಾಯಾಲಯಗಳು ಚಂದಾದಾರರಾಗುವುದು ಅಗತ್ಯ ಎಂದು ರಿಜಿಸ್ಟ್ರಾರ್ ಸೂಚಿಸಿತ್ತು.
ಇದಲ್ಲದೆ, ಜೂಮ್ ಪರವಾನಗಿ ಪಡೆದ ಆವೃತ್ತಿಯನ್ನು ಒದಗಿಸುವಾಗ ಆದ್ಯತೆಯನ್ನು ನಿಗದಿಪಡಿಸಬೇಕು. ಪ್ರಧಾನ ಜಿಲ್ಲಾ ನ್ಯಾಯಾಧೀಶರ ಎಲ್ಲಾ ನ್ಯಾಯಾಲಯಗಳು, ಎಲ್ಲಾ ಸೆಷನ್ಸ್ ನ್ಯಾಯಾಲಯಗಳು, ಸಿವಿಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಕೌಟುಂಬಿಕ ನ್ಯಾಯಾಲಯಗಳು ಮತ್ತು ವಾಣಿಜ್ಯ ನ್ಯಾಯಾಲಯಗಳಿಗೆ ಆದ್ಯತೆ ನೀಡಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನ್ಯಾಯಾಲಯವು, " ಜೂಮ್ ಪರವಾನಗಿ ಪಡೆದ ಆವೃತ್ತಿಯನ್ನು ಪೂರೈಸುವ ಜೊತೆಗೆ ಹೈಕೋರ್ಟ್‌ನ ಕಂಪ್ಯೂಟರ್ ಸಮಿತಿ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಒದಗಿಸುವ ಸಮಗ್ರ ಪ್ರಸ್ತಾವನೆ ಸಿದ್ಧಪಡಿಸಿದರೆ ಸರಿಹೋಗುತ್ತದೆ." ಎಂದಿತು.
ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದ್ದಾಗ ನ್ಯಾಯಾಲಯವು ಬೆಂಗಳೂರು ಭಾರತದ ಸಿಲಿಕಾನ್ ಕಣಿವೆ ಎಂದು ತಿಳಿದಿದ್ದು, ರಾಜ್ಯವು ಅತ್ಯುತ್ತಮ ವೀಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಹೇಳಿತು.
ಬೆಂಗಳೂರು ಭಾರತದ ಸಿಲಿಕಾನ್ ಕಣಿವೆ ಎಂದು ಪ್ರಸಿದ್ಧ. ಆದ್ದರಿಂದ ರಾಜ್ಯದಲ್ಲಿ ಅತ್ಯುತ್ತಮ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಒದಗಿಸಬೇಕು. ಎಲ್ಲಾ ನ್ಯಾಯಾಲಯಗಳಿಗೆ ಅತ್ಯುತ್ತಮ ವಿಡಿಯೋ ಕಾನ್ಫರೆನ್ಸ್ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರವು ಹೈಕೋರ್ಟ್‌ನ ಪ್ರಸ್ತಾಪವನ್ನು ತಕ್ಷಣ ಪರಿಗಣಿಸುತ್ತದೆ ಎಂಬ ಖಚಿತ ನಂಬಿಕೆ ನಮಗಿದೆ.ಕರ್ನಾಟಕ ಹೈಕೋರ್ಟ್
ವರ್ಚುವಲ್ ವಿಚಾರಣೆಗೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಮುಂದೆ ಉದ್ಭವಿಸಬಹುದಾದ ವಿವಿಧ ಕಾನೂನು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿತು.
“ವಿಚಾರಣಾ ನ್ಯಾಯಾಲಯಗಳಲ್ಲಿ ಕೆಲವು ಜೂಮ್ ಅಪ್ಲಿಕೇಷನ್ ಹೊಂದಿವೆ. ಏಕರೂಪತೆ ಇರಬಹುದು. ಜಿಟ್ಸಿ ತುಂಬಾ ಕಳಪೆಯಾಗಿರುವುದರಿಂದ ಎಲ್ಲರಿಗೂ ಪಾವತಿಸಿದ ಜೂಮ್ ಅಪ್ಲಿಕೇಶನ್ ಆವೃತ್ತಿಯನ್ನು ಒದಗಿಸಿ” ಎಂದು ಪೀಠ ಸ್ಪಷ್ಟವಾಗಿ ತಿಳಿಸಿತು.
ಈ ಹಂತದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು “ವರ್ಚುವಲ್ ವಿಚಾರಣೆಗಾಗಿ ಗುಜರಾತ್ ಹೈಕೋರ್ಟ್ ಜೂಮ್ ಬಳಸುತ್ತಿದ್ದು ಮದ್ರಾಸ್ ಹೈಕೋರ್ಟ್ ಮೈಕ್ರೊಸಾಫ್ಟ್ ಟೀಮ್ ಉಪಯೋಗಿಸುತ್ತಿದೆ. ಎರಡನೆಯದು ಬಳಕೆದಾರರ ಸ್ನೇಹಿಯಾಗಿಲ್ಲ” ಎಂದು ಗಮನ ಸೆಳೆದರು.
ಆಗ ನ್ಯಾಯಾಲಯ “ಕೋವಿಡ್ ಮೂರನೇ ಅಲೆ ಇಲ್ಲದಿದ್ದರೂ ಕೂಡ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ಸೂಕ್ತ ವ್ಯವಸ್ಥೆ ಒದಗಿಸುವುದರಿಂದ ಯಶಸ್ಸು ಗಳಿಸಬಹುದು” ಎಂದು ಅಭಿಪ್ರಾಯಪಟ್ಟಿತು.