ಸುದ್ದಿಗಳು

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ: ಮಧ್ಯಾಹ್ನ ವಿಚಾರಣೆ ನಡೆಸಲಿರುವ ಹೈಕೋರ್ಟ್‌

ಅರ್ಜಿದಾರರ ಪರ ವಕೀಲರು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ್‌ ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್‌ ವಿಚಾರಣೆಗೆ ಆದೇಶಿಸಲಾಗಿದ್ದು, ಒಂದೇ ದಿನದಲ್ಲಿ ವರದಿ ನೀಡಲು ಆದೇಶಿಸಬೇಕು ಎಂದರು.

Bar & Bench

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್‌ ಚಾಲೆಂಜರ್ಸ್‌ ತಂಡದ ವಿಜಯೋತ್ಸವಕ್ಕೂ ಮುನ್ನ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿರುವ ಪ್ರಕರಣದ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಕರ್ನಾಟಕ ಹೈಕೋರ್ಟ್‌ ನಡೆಸಲಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ವಕೀಲರೊಬ್ಬರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠದ ಮುಂದೆ ಘಟನೆ ಉಲ್ಲೇಖಿಸಿದರು.

ಈ ವೇಳೆಗಾಗಲೇ ಪೀಠದ ಮುಂದೆ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸರ್ಕಾರ ಎಲ್ಲಾ ಕ್ರಮಕೈಗೊಳ್ಳುತ್ತಿದೆ. ವರದಿ ಸಲ್ಲಿಸುತ್ತೇವೆ. ಈ ಸಂಬಂಧ ಸೂಚನೆ ಪಡೆಯಲಾಗವುದು. ಸ್ಥಳದಲ್ಲಿ ಏನೆಲ್ಲಾ ನಡೆದಿದೆ ಎಂಬ ವಾಸ್ತವಿಕ ವಿಚಾರಗಳನ್ನು ಪೀಠದ ಮುಂದೆ ಇಡಲಾಗುವುದು. ರಾಜ್ಯದ ಜನರಾಗಿ ನಾವೂ ಕುತೂಹಲಿಗಳಾಗಿದ್ದೇವೆ. ಅರ್ಜಿದಾರರ ಬಳಿ ಏನಾದರೂ ಸಲಹೆಗಳಿದ್ದರೆ ನೀಡಬಹುದು” ಎಂದರು.

ಅರ್ಜಿದಾರರ ಪರ ವಕೀಲರು, "ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ್‌ ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್‌ ವಿಚಾರಣೆಗೆ ಆದೇಶಿಸಲಾಗಿದ್ದು, ಒಂದೇ ದಿನದಲ್ಲಿ ವರದಿ ನೀಡಲು ಆದೇಶಿಸಬೇಕು” ಎಂದರು.

ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ನಡೆಸಲಾಗುವುದು ಎಂದು ಹೇಳಿ, ಮುಂದೂಡಿತು.