Chamrajpet idgah masjid and Karnataka HC 
ಸುದ್ದಿಗಳು

ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿವಾದ: ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಪ್ರತಿವಾದಿ ಸ್ಥಾನದಲ್ಲಿರುವ ಸಂಸ್ಥೆಯ ಅಧಿಕಾರಿಯೇ ಪ್ರಕರಣದ‌‌ ಕುರಿತು ಆದೇಶ ಹೊರಡಿಸಲು ಅವಕಾಶವಿಲ್ಲ. ಜಂಟಿ ಆಯುಕ್ತರಿಗೆ ಚಾಮರಾಜಪೇಟೆಯ ಮೈದಾನದ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ವಕ್ಫ್ ಮಂಡಳಿಯ ಆಕ್ಷೇಪ.

Bar & Bench

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದ ಮಾಲೀಕತ್ವದ ವಿಚಾರವು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದು, ರಾಜ್ಯ ಸರ್ಕಾರವು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

ಚಾಮರಾಜಪೇಟೆಯ ಆಟದ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಅವರು ಆಗಸ್ಟ್‌ 6ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಬುಧವಾರ ನಡೆಸಿತು. ಅರ್ಜಿಯಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಮೈದಾನದ‌ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯದ ಕುರಿತು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಅವರ‌ ನೇತೃತ್ವದ ಅರೆ ನ್ಯಾಯಿಕ‌‌ ಮಂಡಳಿಯ ಮುಂದೆ ನಡೆದ ವಿಚಾರಣೆಯಲ್ಲಿ ಬಿಬಿಎಂಪಿ‌ ಸಹ ಪ್ರತಿವಾದಿಯಾಗಿದೆ. ಪ್ರತಿವಾದಿ ಸ್ಥಾನದಲ್ಲಿರುವ ಸಂಸ್ಥೆಯ ಅಧಿಕಾರಿಯೇ ಪ್ರಕರಣದ‌‌ ಕುರಿತು ಆದೇಶ ಹೊರಡಿಸಲು ಅವಕಾಶವಿಲ್ಲ. ಜಂಟಿ ಆಯುಕ್ತರಿಗೆ ಚಾಮರಾಜಪೇಟೆಯ ಮೈದಾನದ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ವಕ್ಫ್ ಮಂಡಳಿ ಆಕ್ಷೇಪಿಸಿದೆ.

ಚಾಮರಾಜಪೇಟೆಯ ಆಟದ ಮೈದಾನ (2.5 ಎಕರೆ) ಆಸ್ತಿಯನ್ನು ವಕ್ಫ್ ಮಂಡಳಿ ಹೆಸರಿಗೆ ಖಾತಾ ಮಾಡಿಕೊಡುವಂತೆ ಕಳೆದ ಜೂನ್ 21ರಂದು ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಯು ವಕ್ಫ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ಮಾಲೀಕತ್ವದ ದೃಢಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಅಂತಿಮವಾಗಿ ಕಳೆದ ಆಗಸ್ಟ್ 3 ರಂದು ಪಶ್ವಿಮ ವಲಯ ಜಂಟಿ ಆಯುಕ್ತರ ಅರೆ ನ್ಯಾಯಿಕ ಮಂಡಳಿಯಲ್ಲಿ ವಿಚಾರಣೆ ನಡೆಸಲಾಗಿತ್ತು.‌ ಈ ವೇಳೆ ಚಾಮರಾಜಪೇಟೆ ಆಟದ ಮೈದಾನದ ಮಾಲೀಕತ್ವ ಸಾಬೀತು ಪಡಿಸುವ ದಾಖಲೆ ಸಲ್ಲಿಸುವಲ್ಲಿ ವಕ್ಫ್ ಮಂಡಳಿಯು ವಿಫಲವಾಗಿದೆ ಎಂದು ತಿಳಿಸಿದ್ದ ಜಂಟಿ ಆಯುಕ್ತರು ಅರ್ಜಿ ವಜಾಗೊಳಿಸಿ ಆಗಸ್ಟ್‌ 6ರಂದು ಆದೇಶಿಸಿದ್ದರು.

ಇ‌ದೀಗ ಈ ಆದೇಶವನ್ನು‌ ಹೈಕೋರ್ಟ್‌ನಲ್ಲಿ‌ ಪ್ರಶ್ನಿಸಲಾಗಿದೆ.