High Court of Karnataka 
ಸುದ್ದಿಗಳು

ಮಸೀದಿ ಮೇಲೆ ಭಾಗವಾಧ್ವಜ ವಾಟ್ಸಾಪ್‌ ಸ್ಟೇಟಸ್‌ ಹಾಕಿದ ಪ್ರಕರಣ: 106 ಆರೋಪಿಗಳಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು

ಎಲ್ಲಾ ಅರ್ಜಿದಾರರು ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಠಾಣೆಗೆ ಬಂದು ಸಹಿ ಹಾಕಬೇಕು. ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು, ತಲಾ ಒಬ್ಬರ ಭದ್ರತೆ ಮತ್ತು ಎರಡು ಲಕ್ಷ ರೂಪಾಯಿಗಳ ಮೌಲ್ಯದ ವೈಯಕ್ತಿಕ ಬಾಂಡ್‌ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ.

Bar & Bench

ಮಸೀದಿ ಮೇಲೆ ಭಾಗವಾಧ್ವಜ ಹಾರಿಸುವ ಅನಿಮೇಟೆಡ್‌ ಚಿತ್ರವನ್ನು ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 106 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಹುಬ್ಬಳ್ಳಿಯ ಮಹಮ್ಮದ್​ ಆರೀಫ್​ ರಿಜ್ವಿ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್​ ಕುಮಾರ್​ ಮತ್ತು ಟಿ ವೆಂಕಟೇಶ್​ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.

ಎಲ್ಲಾ ಅರ್ಜಿದಾರರು ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಠಾಣೆಗೆ ಬಂದು ಸಹಿ ಹಾಕಬೇಕು. ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು, ತಲಾ ಒಬ್ಬರ ಭದ್ರತೆ ಮತ್ತು ಎರಡು ಲಕ್ಷ ರೂಪಾಯಿಗಳ ಮೌಲ್ಯದ ವೈಯಕ್ತಿಕ ಬಾಂಡ್‌ ನೀಡಬೇಕು ಎಂಬ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಪ್ರಕರಣದ ಹಿನ್ನೆಲೆ: ಮಸೀದಿ ಮೇಲೆ ಭಗವಾಧ್ವಜ ಇರುವ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಿತ್ತು. ಇದನ್ನು ಖಂಡಿಸಿ ನೂರಾರು ಮಂದಿ ಮುಸ್ಲಿಮರು 2022ರ ಏಪ್ರಿಲ್​16 ರಂದು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಜಮಾಯಿಸಿದ್ದರು.

ಈ ವೇಳೆ ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ, ಮನೆಗಳ‌ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಎಫ್‌ಐಆರ್‌ ದಾಖಲಾಗಿದ್ದು, 158 ಮಂದಿಯನ್ನು ಬಂಧಿಸಲಾಗಿತ್ತು. ಎನ್​ಐಎ ಮತ್ತು ಯುಎಪಿಎ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ಬರೋಬ್ಬರಿ 4 ಸಾವಿರ ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಎಐಎಂಐಎಂ ಕಾರ್ಪೋರೇಟರ್‌ ನಜೀರ್‌ ಹೊನ್ಯಾಳ ಸೇರಿ 7 ಬಾಲಾಪರಾಧಿಗಳಿಗೆ ಜಾಮೀನು ದೊರೆತಿತ್ತು.

ಇನ್ನುಳಿದ 151 ಆರೋಪಿಗಳಲ್ಲಿ 39 ಮಂದಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಉಳಿದವರು ಜಾಮೀನು ಕೋರಿ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎನ್​ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಹಳೇ ಹುಬ್ಬಳ್ಳಿಯ ಮೊದಲಿಗೆ ಪ್ರಕರಣ ದಾಖಲಾಗಿತ್ತು. ಇದನ್ನು ಎನ್‌ಐಎಗೆ ವಹಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ143, 147, 148, 323, 324, 332, 333, 353, 504, 506, 427, 307, 120B, 225(ಬಿ), 153(ಎ) ಜೊತೆಗೆ 149, ಸಾರ್ವಜನಿಕ ಆಸ್ತಿಗೆ ಹಾನಿ ನಿಷೇಧ ಕಾಯಿದೆ ಸೆಕ್ಷನ್‌ 3(1), ಕಾನೂನುಬಾಹಿರ ಚಟುವಟಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 16(1)(ಬಿ), 18, 20, 43-ಡಿ(5) ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ಎನ್‌ಐಎ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.