Punjab and Haryana High Court 
ಸುದ್ದಿಗಳು

ಹರಿಯಾಣಕ್ಕೆ ಹೆಚ್ಚುವರಿ ನೀರು ಬಿಡುಗಡೆ ಆದೇಶ ಹಿಂಪಡೆಯಲು ಪಂಜಾಬ್ ಸರ್ಕಾರದ ಕೋರಿಕೆ: ಬಿಬಿಎಂಬಿಗೆ ಹೈಕೋರ್ಟ್ ನೋಟಿಸ್

ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದಲ್ಲಿ ಮೇ 2ರಂದು ನಡೆದ ಸಭೆಯಲ್ಲಿ ಹರಿಯಾಣಕ್ಕೆ ಹೆಚ್ಚುವರಿ ನೀರು ಬಿಡುಗಡೆ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಪಾಲಿಸುವ ಆದೇಶವನ್ನು ಪಂಜಾಬ್ ಪ್ರಶ್ನಿಸಿದೆ.

Bar & Bench

ಹರಿಯಾಣಕ್ಕೆ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನ ಪಾಲಿಸುವಂತೆ ಈಚೆಗೆ ಹೈಕೋರ್ಟ್‌ ನೀಡಿದ್ದ ಆದೇಶ ಹಿಂಪಡೆಯಲು ಕೋರಿ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ಭಾಕ್ರಾ ಬಿಯಾಸ್ ಮ್ಯಾನೇಜ್‌ಮೆಂಟ್‌ಗೆ (ಬಿಬಿಎಂಬಿ) ಸೂಚಿಸಿದೆ.

ಭಾಕ್ರಾ ನಂಗಲ್ ಅಣೆಕಟ್ಟಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ನ್ಯಾಯಾಲಯ ಈ ಹಿಂದೆ ಪಂಜಾಬ್ ಸರ್ಕಾರ ಮತ್ತು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಕೇಂದ್ರ ಗೃಹ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮೇ 2ರಂದು ನಡೆದ ಸಭೆಯಲ್ಲಿ ಹರಿಯಾಣಕ್ಕೆ ಹೆಚ್ಚುವರಿ ನೀರು ಬಿಡುಗಡೆ ಮಾಡುವ ನಿರ್ಧಾರವನ್ನು ಪಾಲಿಸುವಂತೆ ಪಂಜಾಬ್ ಸರ್ಕಾರಕ್ಕೆ ಆದೇಶಿಸಲಾಗಿತ್ತು.

ಗೃಹ ಕಾರ್ಯದರ್ಶಿ ಅಂತಹ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿಲ್ಲ ಎಂದು ಇದೀಗ ವಾದಿಸಿರುವ ಪಂಜಾಬ್ ಸರ್ಕಾರ ನಿರ್ದೇಶನವನ್ನು ಹಿಂಪಡೆಯಲು ಕೋರಿದೆ. ನಿಯಮಗಳ ಪ್ರಕಾರ ವಿದ್ಯುತ್ ಸಚಿವಾಲಯದ ಕಾರ್ಯದರ್ಶಿಗೆ ಈ ಅಧಿಕಾರ ಇದೆ ಎಂದು ಅದು ವಾದಿಸಿದೆ.

ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮಿತ್‌ ಗೋಯೆಲ್ ಅವರಿದ್ದ ವಿಭಾಗೀಯ ಪೀಠ ಇಂದು ಅರ್ಜಿ ಕುರಿತು ನೋಟಿಸ್ ಜಾರಿಗೊಳಿಸಿ, ಮೇ 20ಕ್ಕೆ ಪ್ರಕರಣ ಮುಂದೂಡಿತು.

ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳ ತುರ್ತು ಅಗತ್ಯ ಪೂರೈಸಲು ತಾನು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ತಾನು ಮುಂದಾದಾಗ ಅದನ್ನು ಪಂಜಾಬ್ ಪೊಲೀಸರು ತಡೆದಿದ್ದಾರೆ ಎಂದು ಬಿಬಿಎಂಬಿ ದೂರುವ ಮೂಲಕ ವ್ಯಾಜ್ಯ ತಲೆ ಎತ್ತಿತ್ತು.

ನಂತರ ಕೇಂದ್ರ ಗೃಹ ಕಾರ್ಯದರ್ಶಿ ಈ ಸಮಸ್ಯೆಯನ್ನು ಪರಿಹರಿಸಲು ಸಭೆ ನಡೆಸಿ ಹರಿಯಾಣಕ್ಕೆ ಹೆಚ್ಚುವರಿ ನೀರು ಬಿಡುಗಡೆ ಮಾಡಲು ಆದೇಶಿಸಿದ್ದರು. ಮೇ 6ರಂದು, ನ್ಯಾಯಾಲಯ ಪಂಜಾಬ್‌ಗೆ ಈ ನಿರ್ಧಾರ ಪಾಲಿಸುವಂತೆ ಆದೇಶಿಸಿತ್ತು. ಇದೀಗ ಈ ಆದೇಶ ಪ್ರಶ್ನಿಸಿ ಪಂಜಾಬ್‌ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿದೆ.