‘ಸಾಂಸ್ಥಿಕ ಕೊಲೆ’ ಎಂದು ಆರೋಪಿಸಲಾಗಿರುವ ಫಾದರ್ ಸ್ಟ್ಯಾನ್ ಸ್ವಾಮಿ ಅವರ ನಿಧನ ಪ್ರಕರಣದಲ್ಲಿ ಮಹಾರಾಷ್ಟ್ರದ ತಳೋಜಾ ಜೈಲು ಮುಖ್ಯಸ್ಥರ ವಿರುದ್ಧ ತನಿಖೆಗೆ ಆಗ್ರಹಿಸಿ ಅದೇ ಜೈಲಿನಲ್ಲಿ ಬಂಧಿಗಳಾಗಿರುವ 2018ರ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಇಂದು ಕೈಗೊಂಡಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ತಳೋಜಾ ಜೈಲು ಅಧೀಕ್ಷಕ ಕೌಸ್ತುಭ್ ಕುರ್ಲೀಕರ್ ನೀಡಿದ ಸಾಂಸ್ಥಿಕ ಕಿರುಕುಳವು ಸ್ವಾಮಿ ಅವರ ನಿಧನಕ್ಕೆ ಕಾರಣವಾಯಿತು ಎಂದು ಆರೋಪಿಗಳು ಆಪಾದಿಸಿದ್ದಾರೆ. ಸ್ವಾಮಿಯವರು ಬಂಧನದಲ್ಲಿದ್ದಾಗ ಎನ್‌ಐಎ ಹಾಗೂ ಕುರ್ಲೇಕರ್ ಸ್ವಾಮಿ ಅವರಿಗೆ ಹಿಂಸಿಸುವ ಯಾವುದೇ ಸಣ್ಣ ಅವಕಾಶವನ್ನೂ ಬಿಡುತ್ತಿರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.
“ಸ್ವಾಮಿಯವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದರೂ ಅವರನ್ನು ಆಸ್ಪತ್ರೆಯಿಂದ ಜೈಲಿಗೆ ಮರಳಿ ಸ್ಥಳಾಂತರಿಸಿದ್ದು, ಜೈಲಿನಲ್ಲಿ ಕಳಪೆ ಚಿಕಿತ್ಸೆ ನೀಡುತ್ತಿದ್ದುದು, ತೀರಾ ಪ್ರಾಥಮಿಕ ಅವಶ್ಯಕತೆಗಳಾದ ಸ್ಟ್ರಾ (ಹೀರುಗೊಳವೆ) ಹಾಗೂ ಸಿಪ್ಪರ್ ಕೊಡಲೂ ಸಹ ನಿರಾಕರಿಸಿದ್ದು,” ಮುಂತಾದ ಸಂಗತಿಗಳು ಜೈಲು ಅಧಿಕಾರಿಗಳು ತೋರಿದ ದುಂಡಾವರ್ತನೆಗೆ ನಿರ್ಲಕ್ಷ್ಯಕ್ಕೆ ಉದಾಹರಣೆ ಎನ್ನಲಾಗಿದೆ.
ಉಪವಾಸ ಸತ್ಯಾಗ್ರಹದ ಮೂಲಕ ಆರೋಪಿಗಳು ಸ್ವಾಮಿಯವರ ಕಸ್ಟಡಿ ಸಾವಿನ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ. ಸ್ವಾಮಿಯವರ ನಿಧನಕ್ಕೆ ಕಾರಣವಾಗಿದ್ದಕ್ಕಾಗಿ ಜೈಲು ಅಧೀಕ್ಷರ ವಿರುದ್ಧ ಕೊಲೆ ಆರೋಪ ದಾಖಲಿಸಿ ವಿಚಾರಣೆ ನಡೆಸಬೇಕು ಎನ್ನುವುದು ಆರೋಪಿಗಳ ಬೇಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಮನವಿಯೊಂದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಬಂಧೀಖಾನೆಗಳ ಮುಖ್ಯಸ್ಥರಿಗೆ ನೀಡಲಾಗುವುದು ಎನ್ನಲಾಗಿದೆ.