ಸುದ್ದಿಗಳು

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ: ವಿಭಾಗೀಯ ಪೀಠಕ್ಕೆ ಮನವಿ ಮಾಡುವಂತೆ ವರವರರಾವ್‌ಗೆ ಸೂಚಿಸಿದ ಬಾಂಬೆ ಹೈಕೋರ್ಟ್

Bar & Bench

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಮುಂಬೈನಿಂದ ಹೈದರಾಬಾದ್‌ಗೆ ಪ್ರಯಾಣಿಸಲು ಅನುಮತಿ ಪಡೆಯುವುದಕ್ಕಾಗಿ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸುವಂತೆ ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದ ಆರೋಪಿ, ತೆಲುಗು ಕವಿ ವರವರರಾವ್‌ ಅವರಿಗೆ ಬಾಂಬೆ ಹೈಕೋರ್ಟ್‌ ಸೋಮವಾರ ಸೂಚಿಸಿದೆ.

ಮುಂಬೈನಿಂದ ಹೊರ ಹೋಗದಂತೆ ತಮಗೆ ಈ ಹಿಂದೆ ವಿಧಿಸಲಾಗಿದ್ದ ಜಾಮೀನು ಷರತ್ತನ್ನು ಮಾರ್ಪಡಿಸುವಂತೆ ವರವರರಾವ್‌ ಅವರು ಕೋರಿರುವುದನ್ನು ಏಕಸದಸ್ಯ ನ್ಯಾಯಮೂರ್ತಿ ಎಸ್‌ ವಿ ಕೊತ್ವಾಲ್ ಅವರಿದ್ದ ಪೀಠ ಗಮನಿಸಿತು. ಹೈಕೋರ್ಟ್ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿತ್ತು.

"ಅರ್ಜಿದಾರರಿಗೆ ನೀಡಲಾದ ಜಾಮೀನಿಗೆ ಸಂಬಂಧಿಸಿದಂತೆ ವಿಧಿಸಲಾದ ಷರತ್ತಿನ ಮಾರ್ಪಾಡಿಗಾಗಿ ಮನವಿ ಮಾಡಿರುವುದನ್ನು ಎರಡೂ ಕಡೆಯ ವಕೀಲರು ಒಪ್ಪಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ರೂಪಿಸಿದ ಕಾನೂನಿನ ದೃಷ್ಟಿಯಿಂದ ಪ್ರಕರಣವನ್ನು ವಿಭಾಗೀಯ ಪೀಠಕ್ಕೇ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿತು.

ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಮೇಲ್ಮನವಿಯಾಗಿ ಪರಿವರ್ತಿಸಲಾಗಿದ್ದು ನ್ಯಾಯಮೂರ್ತಿ ಎ ಎಸ್ ಗಡ್ಕರಿ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಲಿದೆ.

ಭೀಮಾ ಕೋರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವ್‌ ಅವರನ್ನು 2018 ರಲ್ಲಿ ಬಂಧಿಸಲಾಗಿತ್ತು. ಮಾರ್ಚ್ 2021 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಬಾಂಬೆ ಹೈಕೋರ್ಟ್ 6 ತಿಂಗಳ ಕಾಲ ತಾತ್ಕಾಲಿಕ ಜಾಮೀನು ನೀಡಿತ್ತು.

ಸುಪ್ರೀಂ ಕೋರ್ಟ್ ಆಗಸ್ಟ್ 2022ರಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಮುಂಬೈನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಪ್ರಾದೇಶಿಕ ವ್ಯಾಪ್ತಿಯನ್ನು ತೊರೆಯುವಂತಿಲ್ಲ ಎಂಬುದು ರಾವ್‌ ಅವರಿಗೆ ಜಾಮೀನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳಲ್ಲಿ ಒಂದಾಗಿತ್ತು.