<div class="paragraphs"><p>Mumbai Sessions Court, BHIMA KOREGAON</p></div>

Mumbai Sessions Court, BHIMA KOREGAON

 
ಸುದ್ದಿಗಳು

ಮೋದಿ ಆಡಳಿತ ಕೊನೆಗಾಣಿಸಲು ರಾಜೀವ್ ಹತ್ಯೆ ಮಾದರಿ ಕೃತ್ಯದ ಯೋಜನೆ; ಭೀಮಾ ಕೋರೆಗಾಂವ್ ಆರೋಪಿಗಳಿಗೆ ಜಾಮೀನು ನಿರಾಕರಣೆ

Bar & Bench

ದೇಶದಲ್ಲಿ ಮೋದಿ ಆಡಳಿತವನ್ನು ಅಂತ್ಯಗೊಳಿಸಲು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳು ಬರೆದಿದ್ದ ಪತ್ರ ಆಧರಿಸಿ ನಾಲ್ವರ ಜಾಮೀನು ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ದೇಶದ್ರೋಹ, ಕ್ರಿಮಿನಲ್ ಪಿತೂರಿ, ಯುಎಪಿಎ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಬೀರ್ ಕಲಾ ಮಂಚ್ ಸದಸ್ಯರಾದ ಸಾಗರ್ ಗೋರ್ಖೆ, ರಮೇಶ್ ಗಾಯ್‌ಚೋರ್ ಮತ್ತು ಜ್ಯೋತಿ ಜಗತಾಪ್ ಹಾಗೂ ಸಹಾಯಕ ಪ್ರಾಧ್ಯಾಪಕ ಹನಿಬಾಬು ಅವರನ್ನು ಬಂಧಿಸಲಾಗಿತ್ತು.

ಎನ್‌ಐಎ ಸಲ್ಲಿಸಿರುವ ಸಾಕ್ಷ್ಯಗಳು, ಆರೋಪಿಗಳ ಘೋಷಣೆಗಳು ಕಾನೂನಿನಿಂದ ಸ್ಥಾಪಿಸಲಾಗಿರುವ ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ನಂಬುವಂತೆ ಮಾಡಿವೆ ಎಂದು ವಿಶೇಷ ನ್ಯಾಯಾಧೀಶರಾದ ಡಿ.ಇ.ಕೋಥಲಿಕರ್ ಅಭಿಪ್ರಾಯಪಟ್ಟಿದ್ದಾರೆ. ಘೋಷಣೆಗಳು ವಿವಿಧ ಗುಂಪುಗಳ ನಡುವೆ ದ್ವೇಷ ಉಂಟು ಮಾಡುತ್ತವೆ. ಸಾಮರಸ್ಯ ಕಾಯ್ದುಕೊಳ್ಳು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಕೃತ್ಯಗಳು ಧಕ್ಕೆ ತರುವಂತಿವೆ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಸಹ ಆರೋಪಿ ರೋನಾ ವಿಲ್ಸನ್‌ ವ್ಯಕ್ತಿಯೊಬ್ಬರಿಗೆ ಬರೆದಿರುವ ಪತ್ರದಲ್ಲಿ ಮೋದಿ ಆಡಳಿತವನ್ನು ಕೊನೆಗಾಣಿಸಲು ಮಾವೋವಾದಿಗಳು ಟೊಂಕಕಟ್ಟಿ ನಿಂತಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. "ಮೋದಿ ನೇತೃತ್ವದ ಹಿಂದೂ ಫ್ಯಾಸಿಸ್ಟ್ ಆಡಳಿತ ಸ್ಥಳೀಯ ಆದಿವಾಸಿಗಳ ಜೀವನದಲ್ಲಿ ದಬ್ಬಾಳಿಕೆ ಮಾಡುತ್ತಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ದೊಡ್ಡ ಸೋಲಿನ ನಡುವೆಯೂ, ಮೋದಿ 15 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಾರೆ. ಇದೇ ರೀತಿ ಮುಂದುವರೆದರೆ, ಎಲ್ಲಾ ರಂಗಗಳಲ್ಲಿ ಪಕ್ಷಕ್ಕೆ ಅಪಾರ ತೊಂದರೆ ಆಗುತ್ತದೆ. ಅಭಿಪ್ರಾಯ ಭೇದದ ಮತ್ತಷ್ಟು ನಿಗ್ರಹ ಮತ್ತು ಮಿಷನ್ 2016 ಮಾದರಿಯ ಇನ್ನು ಹೆಚ್ಚು ಕ್ರೂರ ರೂಪ ಪ್ರಕಟವಾಗಲಿದೆ. ಮೋದಿ ರಾಜ್ಯವನ್ನು ಅಂತ್ಯಗೊಳಿಸಲು ಕಿಷನ್‌ ಮತ್ತಿತರ ಹಲವು ಕಾಮ್ರೇಡ್‌ಗಳು ನಿರ್ದಿಷ್ಟ ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ನಾವು ಮತ್ತೊಂದು ರಾಜೀವ್ ಗಾಂಧಿ ಮಾದರಿಯ ಘಟನೆಯ ನಿಟ್ಟಿನಲ್ಲಿ ಯೋಚಿಸುತ್ತಿದ್ದೇವೆ. ಅದು ಆತ್ಮಘಾತುಕವಾಗಿ ಧ್ವನಿಸಬಹುದು ಆದರೆ ನಾವು ಸೋತರೂ ಪಕ್ಷದ ಪಿಬಿ/ಸಿಸಿ ಈ ಪ್ರಸ್ತಾಪದ ಬಗ್ಗೆ ಸೂಕ್ಷ್ಮವಾಗಿ ಪರಿಗಣಿಸಬೇಕು ಎಂದು ನಾವು ಭಾವಿಸುತ್ತೇವೆ. ಅವರ (ಮೋದಿಯ) ರೋಡ್‌ ಶೋಗಳನ್ನು ಗುರಿಯಾಗಿಸಿಕೊಳ್ಳುವುದು ಪರಿಣಾಮಕಾರಿ ತಂತ್ರವಾಗಿದೆ. ಎಲ್ಲಾ ತ್ಯಾಗಗಳಿಗಿಂತ ಪಕ್ಷದ ಉಳಿವು ದೊಡ್ಡದು ಎಂಬುದು ನಮ್ಮೆಲ್ಲರ ನಂಬಿಕೆ” ಎಂಬ ಪತ್ರದಲ್ಲಿರುವ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ.

"ಸದಸ್ಯರು ರಾಜೀವ್‌ ಗಾಂಧಿ ಹತ್ಯೆಯಂತಹ ಘಟನೆಯನ್ನೇ ಆಲೋಚಿಸುತ್ತಿದ್ದಾರೆ. ಈ ಆರೋಪಗಳನ್ನು ಪರಿಗಣಿಸಿದಾಗ ಪ್ರಕರಣ ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧ ಇದೆ ಎಂದು ತಿಳಿಸಲು ಯಾವುದೇ ಹಿಂಜರಿಕೆ ಇಲ್ಲ. ಆರೋಪಿಗಳು ನಿಷೇಧಿತ ಸಂಘಟನೆಯ ಇತರ ಸದಸ್ಯರೊಂದಿಗೆ ಸೇರಿ ಇಡೀ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ರಾಜಕೀಯವಾಗಿ ಸರ್ಕಾರವನ್ನು ಸದೆಬಡಿಯಲು ಗಂಭೀರ ಸಂಚು ರೂಪಿಸಿದ್ದರು. ಸಂಚು ರೂಪಿಸಿರುವ ಬಗ್ಗೆ ಅವರಿಗೆ ಅರಿವಿತ್ತು" ಎಂದು ನ್ಯಾಯಾಲಯ ಹೇಳಿದೆ.