ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ವರ್ನನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ [ವೆರ್ನಾನ್ ವರ್ಸಸ್ ಮಹಾರಾಷ್ಟ್ರ ರಾಜ್ಯ ಮತ್ತು ಇತರರು].
ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಅದೊಂದೇ ಅವರಿಗೆ ಜಾಮೀನು ನಿರಾಕರಿಸಲು ಆಧಾರವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
“ಆರೋಪಗಳು ಗಂಭೀರವಾಗಿವೆ, ಹಾಗೆಂದು ಅದರರ್ಥ ಜಾಮೀನು ನೀಡಬಾರದು ಎಂದಲ್ಲ. ಜಾಮೀನು ನೀಡುವ ಕುರಿತು ನಮ್ಮ ಅಭಿಪ್ರಾಯವನ್ನು ರೂಪಿಸುವಾಗ, ಅವರು ಈ ಹಿಂದೆ 1967 ರ ಕಾಯ್ದೆಯ ಅಡಿಯಲ್ಲಿ ಅಪರಾಧಗಳಿಗೆ ಶಿಕ್ಷೆಗೊಳಗಾದವರು ಎಂದು ನಾವು ಗಮನಿಸಿದ್ದೇವೆ. ಆದ್ದರಿಂದ, ಜಾಮೀನಿನ ಮೇಲೆ ಸೂಕ್ತ ಷರತ್ತುಗಳನ್ನು ವಿಧಿಸಲು ನಾವು ಪ್ರಸ್ತಾಪಿಸುತ್ತೇವೆ. ಆಕ್ಷೇಪಾರ್ಹವಾದ ಆದೇಶವನ್ನು ಬದಿಗೆ ಸರಿಸಿ ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ” ಎಂದು ನ್ಯಾಯಾಲಯ ಆದೇಶಿಸಿದೆ.
ಜಾಮೀನು ನೀಡುವ ವೇಳೆ ನ್ಯಾಯಾಲಯ ವಿಧಿಸಿರುವ ಷರತ್ತುಗಳು ಹೀಗಿವೆ:
- ಇಬ್ಬರು ಆರೋಪಿಗಳೂ ಮಹಾರಾಷ್ಟ್ರ ಬಿಟ್ಟು ಹೋಗುವಂತಿಲ್ಲ.
- ಇಬ್ಬರೂ ತಮ್ಮ ಪಾಸ್‌ಪೋರ್ಟ್ ಅನ್ನು ಎನ್‌ಐಎ ವಶಕ್ಕೆ ನೀಡಬೇಕು.
- ಇಬ್ಬರೂ ತಲಾ ಒಂದು ಮೊಬೈಲ್ ಫೋನ್ ಮಾತ್ರವೇ ಬಳಕೆ ಮಾಡಬೇಕು.
- ತಮ್ಮ ವಿಳಾಸದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
- ಮೊಬೈಲ್ ನಂಬರ್ ಅನ್ನು ಎನ್‌ಐಎ ಅಧಿಕಾರಿಗಳಿಗೆ ನೀಡಬೇಕು. ಮೊಬೈಲ್ ಅನ್ನು ಚಾರ್ಜಿಂಗ್ ಸ್ಥಿತಿಯಲ್ಲಿಡಬೇಕು ಮತ್ತು ಸ್ಥಳದ ಬಗ್ಗೆ ಎನ್‌ಐಎ ಅಧಿಕಾರಿಗಳು ಟ್ರ್ಯಾಕ್ ಮಾಡಲು ಲೋಕೇಷನ್ ಆನ್ ಮಾಡಿರುವ ಸ್ಥಿತಿಯಲ್ಲಿರಿಸಿ ಅವಕಾಶ ಕಲ್ಪಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.