High Court of Karnataka 
ಸುದ್ದಿಗಳು

ಭೋವಿ ನಿಗಮದ ಹಣ ದುರ್ಬಳಕೆ: ಮೂರು ತಿಂಗಳಲ್ಲಿ ಸಕ್ಷಮ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಸೂಚನೆ

ನಿರ್ದಿಷ್ಟ‌ ಕಾರಣಕ್ಕಾಗಿ ಭೋವಿ ನಿಗಮ ರೂಪಿಸಲಾಗಿದೆ. ಫಲಾನುಭವಿಗಳು ಬಡವರಾಗಿದ್ದು, ಅವರಿಗೆ ₹5 ಲಕ್ಷ ನೀಡಿರುವುದನ್ನು ನುಂಗಿದರೆ ಅದೊಂದು ದೊಡ್ಡ ಪಾಪ ಕೃತ್ಯ ಎಂದ ನ್ಯಾಯಾಲಯ.

Bar & Bench

ಭೋವಿ ಅಭಿವೃದ್ಧಿ ನಿಗಮದ ₹80 ಕೋಟಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಸಿಐಡಿಯು ತನಿಖಾ ವರದಿ ಸಲ್ಲಿಸಬೇಕು. ರಕ್ಷಣೆ ಆದೇಶ ಪಡೆದಿರುವವರು 10 ದಿನಗಳಲ್ಲಿ ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದ್ದು, ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಆರ್‌ ಲೀಲಾವತಿ, ಪ್ರಧಾನ ವ್ಯವಸ್ಥಾಪಕ ಡಾ. ಬಿ ಕೆ ನಾಗರಾಜಪ್ಪ, ಕಾಂತು ಒಡೆಯರ್, ರಾಮಕೃಷ್ಣ ಮತ್ತು ಎಂ ಯಶಸ್ವಿನಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

Justice M Nagaprasanna

“ಈ ಪ್ರಕರಣದಲ್ಲಿ ನಿಸ್ಸಂಶಯವಾಗಿ ತನಿಖೆ ಅಗತ್ಯವಾಗಿದ್ದು, ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್‌ ಅವರು ತನಿಖೆ ಮುಕ್ತಾಯ ಹಂತದಲ್ಲಿದೆ ಎಂದು ಹೇಳಿದ್ದಾರೆ. ನಾಗರಾಜಪ್ಪ ಅವರನ್ನು ಕಸ್ಟಡಿ ತನಿಖೆಗೆ ನೀಡಿದರೆ ತನಿಖೆ ಮುಕ್ತಾಯವಾಗಲಿದೆ ಎಂದಿದ್ದಾರೆ. ಈ ವಿಚಾರದಲ್ಲಿ ಕಾನೂನಿನ ಅನ್ವಯ ಪ್ರಾಸಿಕ್ಯೂಷನ್‌ ನಿರ್ಧಾರ ಕೈಗೊಳ್ಳಬಹುದಾಗಿದೆ. ಜಗದೀಶ್‌ ಅವರು ಮೂರು ತಿಂಗಳಲ್ಲಿ ತನಿಖೆ ಮುಗಿಸಿ, ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಅರ್ಜಿದಾರ ಆರೋಪಿಗಳು ಸಕ್ಷಮ ನ್ಯಾಯಾಲಯದಿಂದ ಜಾಮೀನು ಪಡೆಯುವವರೆಗೆ 10 ದಿನಗಳ ಮಟ್ಟಿಗೆ ಕಾಲಾವಕಾಶ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಪೀಠವು “ನಿಗಮದ ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಹಣ ಡ್ರಾ ಮಾಡಲಾಗಿದೆ. ಒಬ್ಬೇ ಒಬ್ಬ ಫಲಾನುಭವಿಗೂ ಹಣ ಹೋಗಿಲ್ಲವೇ? ಫಲಾನುಭವಿಗಳಿಗೆ ಹಣ ನೀಡುವಂತೆ ಸರ್ಕಾರ ಸಲ್ಲಿಸಿರುವ ಪಟ್ಟಿ ನೀಡಬೇಕು. ನಿರ್ದಿಷ್ಟ‌ ಕಾರಣಕ್ಕಾಗಿ ಭೋವಿ ನಿಗಮ ರೂಪಿಸಲಾಗಿದೆ. ಫಲಾನುಭವಿಗಳು ಬಡವರಾಗಿದ್ದು, ಅವರಿಗೆ ₹5 ಲಕ್ಷ ರೂಪಾಯಿ ನೀಡಿರುವುದನ್ನು ನುಂಗಿದರೆ ಅದೊಂದು ದೊಡ್ಡ ಪಾಪ ಕೃತ್ಯವಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಹಣ ನೀಡಲಾಗಿದ್ದು, ಇದುವರೆಗೆ ಎಷ್ಟು ಕೊಳವೆ ಬಾವಿ ಕೊರೆಸಲಾಗಿದೆ? ಅರ್ಧಂಬರ್ಧ ತನಿಖೆ ಏಕೆ ಮಾಡುತ್ತೀರಿ? ₹80 ಕೋಟಿ ರೂಪಾಯಿ ಬಡವರ ಹಣ ಎಲ್ಲಿ ಹೋಗಿದೆ?” ಎಂದು ಕಿಡಿಕಾರಿತು.

ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಜೀವನ್‌ ಕುಮಾರ್‌ ಅವರು “ಭೋವಿ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸುವ ಗಂಗಾ ಕಲ್ಯಾಣ, ಸಮೃದ್ಧಿ, ಭೂ ಒಡೆತನ, ಐರಾವತ ಮತ್ತು ನಿಗಮದ ಇತರೆ ಯೋಜನೆಗಳಲ್ಲಿ ಅಕ್ರಮವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಯೋಜನೆಯ ಕುರಿತು ತನಿಖೆ ನಡೆಸಿಲ್ಲ. ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಆರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದ್ದು, ನಾಗರಾಜಪ್ಪ, ಲೀಲಾವತಿ ಮತ್ತು ಸುಬ್ಬಪ್ಪ ಅವರನ್ನು ಗುರಿಯಾಗಿಸಲಾಗಿದೆ. 21.11.2021ರಂದು ನಾಗರಾಜಪ್ಪ ಅವರೇ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಇದನ್ನು ಎತ್ತಿದ್ದಕ್ಕೆ ಅವರನ್ನು ಬಲಿಪಶು ಮಾಡಲಾಗಿದೆ. ಇಲ್ಲಿ 30 ಮಂದಿ ಫಲಾನುಭವಿಗಳು ಮಾತ್ರ ಇದ್ದಾರೆ. ಒಬ್ಬರಿಗೆ ₹5 ಲಕ್ಷ ಎಂದರೂ ಅದು ಮೂರು ಕೋಟಿ ರೂಪಾಯಿ ದಾಟುವುದಿಲ್ಲ. ಹೀಗಿರುವಾಗ ₹100, ₹150 ಕೋಟಿ ಹಗರಣ ಎಂದು ಹೇಳುವುದನ್ನು ಒಪ್ಪಲಾಗದು” ಎಂದರು.

“ಸರ್ಕಾರ ಪಟ್ಟಿ ಕಳುಹಿಸಿದ್ದು, ಬೋಗಸ್‌ ಪಟ್ಟಿಯನ್ನು ನಾವು ಮಾಡಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ ಸರಿಯಾಗಿ ತನಿಖೆಯಾದರೆ ಎಲ್ಲರ ಅಕ್ರಮವೂ ಆಚೆ ಬರುತ್ತದೆ. ಎಲ್ಲ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ನಾಗರಾಜಪ್ಪ ಅವರ ಖಾತೆಗೆ ಒಂದೇ ಒಂದು ರೂಪಾಯಿ ಭೋವಿ ನಿಗಮದ ಹಣ ಬಂದಿದೆ ಎಂಬುದನ್ನು ತೋರಿಸಿದರೆ ಈ ಅರ್ಜಿಯನ್ನು ಹಿಂಪಡೆಯುತ್ತೇವೆ. ಕೊಳವೆ ಬಾವಿ ಕೊರೆಸುವ ಹಗರಣದ ಕುರಿತು ಇದುವರೆಗೂ ಯಾವುದೇ ತನಿಖೆಯಾಗಿಲ್ಲ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪ್ರಕರಣದ ತನಿಖೆ ಬಹುತೇಕ ಮುಗಿದಿದೆ. ನಿಗಮದಲ್ಲಿ ಫಲಾನುಭವಿಗಳ ಪಟ್ಟಿಯನ್ನು ನಾಶಪಡಿಸಲಾಗಿದೆ. ಬ್ಯಾಂಕ್‌ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಾಲಯದ ಮುಂದೆ ಇಟ್ಟಿದ್ದೇವೆ. 200ಕ್ಕೂ ಹೆಚ್ಚು ಫಲಾನುಭವಿಗಳ ₹11 ಕೋಟಿಗೂ ಹೆಚ್ಚು ಹಣ ಅವ್ಯವಹಾರವಾಗಿದೆ. ಹೆಸರು, ಸಹಿ ಪಡೆದು ಪತ್ರವನ್ನು ಬ್ಯಾಂಕ್‌ಗೆ ನೀಡಲಾಗಿದೆ. ಫಲಾನುಭವಿಗಳ ಹೆಸರಿನಲ್ಲಿ ಖಾತೆ ತೆರೆದು ಹಣ ಹಾಕಲಾಗಿದೆ. ಅಲ್ಲಿಂದ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ತೆರೆದಿರುವ ಖಾತೆಗೆ ಹಣವೆಲ್ಲಾ ಹೋಗಿದೆ. ಅಲ್ಲಿಂದ ಹಣ ತೆಗೆಯಲಾಗಿದೆ. ಈ ಎಂಟರ್‌ಪ್ರೈಸಸ್‌ನ ನೆಲೆಯು ನಾಗರಾಜಪ್ಪ ಮನೆಯಲ್ಲಿದೆ. ಸರ್ಕಾರದ ಆದೇಶವನ್ನು ತಿರುಚುವ ಮೂಲಕ ಹಣ ವರ್ಗಾಯಿಸಲಾಗಿದೆ. ಸಹಿಯನ್ನು ನ್ಯಾಯಾಲಯ ಪರಿಶೀಲಿಸಬಹುದು” ಎಂದರು.