ಸಾಲ ವಸೂಲಾತಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಭೂಷಣ್ ಪವರ್ ಅಂಡ್ ಸ್ಟೀಲ್ ಅನ್ನು ಜೆಎಸ್‌ಡಬ್ಲ್ಯೂ ಸ್ಟೀಲ್ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ತಾನು ಸಲ್ಲಿಸಿರುವ ಮೇಲ್ಮನವಿ ಮುಂದುವರೆಸದೆ ಇರಲು ಜಾರಿ ನಿರ್ದೇಶನಾಲಯ ಈಚೆಗೆ ನಿರ್ಧರಿಸಿದೆ [ಕಮಿಟಿ ಆಫ್ ಕ್ರೆಡಿಟರ್ಸ್ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].
ಆ ಮೂಲಕ ಐಬಿಸಿ ಅಡಿಯಲ್ಲಿ ನಡೆದ ದಿವಾಳಿತನ ಪ್ರಕ್ರಿಯೆ ಅನುಸಾರ ಭೂಷಣ್ ಪವರ್ ಸ್ವಾಧೀನಕ್ಕಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಶಸ್ವಿಯಾದ ಜೆಎಸ್‌ಡಬ್ಲ್ಯೂ ಸ್ಟೀಲ್‌ಗೆ ಜೆಎಸ್‌ಡಬ್ಲ್ಯೂ ಸ್ಟೀಲ್‌ಗೆ ₹4,025 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಹಸ್ತಾಂತರಿಸಿದೆ.
ಭೂಷಣ್ ಪವರ್‌ನಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿ ಹಸ್ತಾಂತರಿಸುವಂತೆ ಇ ಡಿಗೆ ಡಿ. 11ರಂದು ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಆಸ್ತಿ ಮರಳಿಸಲಾಗಿದೆ.
ಭೂಷಣ್ ಪವರ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕರಣವನ್ನು ಮುಂದುವರಿಸದೆ ಇರಲು ಇ ಡಿ ನಿರ್ಧರಿಸಿದ ನಂತರ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತು.
ಡಿಸೆಂಬರ್ 2019ರಿಂದ ಜಾರಿಗೆ ಬರುವಂತೆ ಸೆಕ್ಷನ್ 32 ಎ ಸೇರಿಸಲಾಗಿತ್ತು. ದಿವಾಳಿತನದ ಅಡಿಯಲ್ಲಿ ಕಂಪನಿಯ ರೆಸಲ್ಯೂಶನ್ ಯೋಜನೆಯನ್ನು ಅನುಮೋದಿಸಿದರೆ ಕಾರ್ಪೊರೇಟ್ ಸಾಲಗಾರ ಮತ್ತು ಅದರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಅದು ವಿನಿಯಾತಿ ನೀಡುತ್ತದೆ. ಇದರರ್ಥ ಇಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ರೆಸಲ್ಯೂಷನ್ ಪ್ಲಾನ್‌ನ ಅನುಮೋದನೆ ಆಧರಿಸಿರುತ್ತದೆ.
ಐಬಿಸಿಗೆ ಸೆಕ್ಷನ್ 32 ಎ ಸೇರಿಸುವ ಮುನ್ನವೇ ಇಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಭೂಷಣ್ ಪವರ್ ಪ್ರಕರಣಕ್ಕೆ ಅನ್ವಯಿಸಬಾರದು ಎಂದು ಇ ಡಿ ಈ ಹಿಂದೆ ವಾದಿಸಿತ್ತು.
ಆದರೆ, ಡಿಸೆಂಬರ್ 2ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಇಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠಕ್ಕೆ ಸೆಕ್ಷನ್ 32 ಎ ದೃಷ್ಟಿಯಿಂದ ಇಡಿ ಮೇಲ್ಮನವಿ ಸಲ್ಲಿಸಲಾಗದು ಎಂದು ತಿಳಿಸಿದ್ದರು.