Justice R Nataraj 
ಸುದ್ದಿಗಳು

ಬಿಡದಿ ಸಮಗ್ರ ಟೌನ್‌ಶಿಪ್‌: ಭೂಮಾಲೀಕರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೈಕೋರ್ಟ್‌ಗೆ ಸರ್ಕಾರದ ವಿವರಣೆ

“ಯೋಜನೆಯ ಭೂ ಸ್ವಾಧೀನ ವೆಚ್ಚ ₹18 ಸಾವಿರ ಕೋಟಿಗಳಷ್ಟಿದ್ದರೆ ರಾಜ್ಯ ಸರ್ಕಾರ ಈ ಯೋಜನೆಗೆ ಸುಮಾರು ₹33 ಸಾವಿರ ಕೋಟಿಯ ಗುರಿ ಇರಿಸಿದೆ. ಇದರಲ್ಲಿ ಸಾರ್ವಜನಿಕ ಉದ್ದೇಶದ ಇರಾದೆಯಿಲ್ಲ” ಎಂದು ಅರ್ಜಿದಾರರ ವಾದ.

Bar & Bench

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ವ್ಯಾಪ್ತಿಯಲ್ಲಿನ ಉದ್ದೇಶಿತ ಬಿಡದಿ ಸಮಗ್ರ ಟೌನ್‌ಶಿಪ್‌ ಯೋಜನೆಯಡಿ ಈತನಕ ಭೂ ಸ್ವಾಧೀನಕ್ಕೆ ಪರಿಹಾರ ಘೋಷಣೆ ಮಾಡಿ ತೀರ್ಪು ಹೊರಡಿಸದೇ ಇರುವ ಹಿನ್ನೆಲೆಯಲ್ಲಿ ಅರ್ಜಿದಾರ ಭೂ ಮಾಲೀಕರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಟೌನ್‌ಶಿಪ್‌ ಯೋಜನೆ ಪ್ರಶ್ನಿಸಿ ಬಿಡದಿ ಹೋಬಳಿಯ ತಾಯಪ್ಪನದೊಡ್ಡಿಯ ಎಸ್‌ ಎಚ್‌ ಹರಿಪ್ರಸಾದ್‌ ಸೇರಿದಂತೆ ಒಟ್ಟು 18 ಕೃಷಿಕರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎ ವಿ ನಿಶಾಂತ್‌, “ಯೋಜನೆಯ ಭೂ ಸ್ವಾಧೀನ ವೆಚ್ಚ ₹18 ಸಾವಿರ ಕೋಟಿಗಳಷ್ಟಿದ್ದರೆ ರಾಜ್ಯ ಸರ್ಕಾರ ಈ ಯೋಜನೆಗೆ ಸುಮಾರು ₹33 ಸಾವಿರ ಕೋಟಿಯ ಗುರಿ ಇರಿಸಿದೆ. ಇದರಲ್ಲಿ ಸಾರ್ವಜನಿಕ ಉದ್ದೇಶದ ಇರಾದೆಯಿಲ್ಲ” ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌  ಕೆ ಶಶಿಕಿರಣ ಶೆಟ್ಟಿ ಅವರು “ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಈತನಕ ಯಾವುದೇ ಪರಿಹಾರ ನಿರ್ಧಾರ ಮಾಡಿ ತೀರ್ಪು ಹೊರಡಿಸದೇ ಇರುವ ಕಾರಣ ಭೂ ಮಾಲೀಕರನ್ನು ಒಕ್ಕಲೆಬ್ಬಿಸುವುದಿಲ್ಲ” ಎಂದು ಪೀಠಕ್ಕೆ ಭರವಸೆ ನೀಡಿದರು ಮತ್ತು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

ಇದನ್ನು ದಾಖಲಿಸಿಕೊಂಡ ಪೀಠವು ಪ್ರತಿವಾದಿಗಳಾದ ರಾಜ್ಯ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಟೌನ್‌ಶಿಪ್‌ ಯೋಜನೆಯ ಭೂ ಸ್ವಾಧೀನ ಅಧಿಕಾರಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಸೇರಿದಂತೆ ಇತರರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್‌ 25ಕ್ಕೆ ಮುಂದೂಡಿತು.

ಆಗಸ್ಟ್‌ ೪ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಟೌನ್‌ಶಿಪ್‌ಗೆ ಭೂಸ್ವಾಧೀನ ಮಾಡಿಕೊಂಡಿರುವುದನ್ನು ರದ್ದುಪಡಿಸುವಂತೆ ಕೋರಿ ಹೊಸೂರು ಗ್ರಾಮದ ಗಿರಿಜಮ್ಮ ಮತ್ತಿತರರು ಸಲ್ಲಿಸಿರುವ ಅರ್ಜಿ ಸಂಬಂಧಿತ ವಿಚಾರಣೆಯಲ್ಲಿಯೂ ಸರ್ಕಾರವು ಮೇಲಿನ ವಾಗ್ದಾನ ನೀಡಿತ್ತು.