ಸುದ್ದಿಗಳು

ಬಿಡದಿ ಟೌನ್‌ಶಿಪ್‌ ಯೋಜನೆ: ಅನುಮತಿ ಇಲ್ಲದೇ ಸರ್ಕಾರ ಒಂದು ಇಟ್ಟಿಗೆಯನ್ನು ಸ್ಥಳಾಂತರಿಸಲು ಬಿಡಲ್ಲ ಎಂದ ಹೈಕೋರ್ಟ್‌

ನ್ಯಾಯಾಲಯದ ಅನುಮತಿ ಪಡೆಯದೇ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನೂ ಸರ್ಕಾರ ಕೈಗೊಳ್ಳಕೂಡದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್.

Bar & Bench

ಗ್ರೇಟರ್‌ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್‌ (ಬಿಡದಿ ಟೌನ್‌ಶಿಪ್‌)ಗಾಗಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಬಿದ್ದಿದ್ದರೂ ಪರಿಹಾರ ನಿಗದಿಪಡಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುವಂತೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದ್ದು, ತನ್ನ ಅನುಮತಿ ಇಲ್ಲದೇ ಒಂದು ಇಟ್ಟಿಗೆ ಕದಲಲು ಬಿಡುವುದಿಲ್ಲ ಎಂದಿದೆ.

ಹೊಸೂರು ಗ್ರಾಮದ ರೈತ ಮಹಿಳೆ ಗಿರಿಜಮ್ಮ ಸೇರಿ ಹಲವು ರೈತರು ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice R Nataraj

ಭೂ ಸ್ವಾಧೀನ ಮಾಡಿಕೊಂಡು ರೈತರನ್ನು ಅಲ್ಲಿಂದ ಹೊರಹಾಕುವ ಮುನ್ನ ಸರ್ಕಾರ ತಾನು ಕೈಗೊಂಡ ಪರಿಹಾರ ನಿಗದಿ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್‌ 29ಕ್ಕೆ ಮುಂದೂಡಿತು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರರ ಪರ ವಕೀಲರು, “ಸರ್ಕಾರ ರಾತ್ರೋರಾತ್ರಿ ಪರಿಹಾರವನ್ನು ನಿಗದಿಪಡಿಸಿ ರೈತರನ್ನು ಒಕ್ಕಲೆಬ್ಬಿಸುವ ಮತ್ತು ಮರಗಳನ್ನು ಕತ್ತರಿಸುವ ಸಾಧ್ಯತೆ ಇದೆ. ಹೀಗಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು” ಎಂದು ನ್ಯಾಯಾಲಯವನ್ನು ಕೋರಿದರು.

ಆಗ ಪೀಠವು “ಅದು ಹೇಗೆ ಸಾಧ್ಯ? ಈಗಾಗಲೇ ಸರಕಾರ ಭೂ ಸ್ವಾಧೀನಕ್ಕೆ ಪರಿಹಾರ ನಿಗದಿಪಡಿಸಿಲ್ಲ. ಪರಿಹಾರ ನಿಗದಿಯಾಗುವವರೆಗೂ ಅರ್ಜಿದಾರರ ಸ್ವತ್ತು ಸ್ವಾಧೀನ ಮಾಡುವುದಿಲ್ಲ, ಯಾರನ್ನೂ ತೆರವುಗೊಳಿಸುವುದಿಲ್ಲವೆಂದು ಮುಚ್ಚಳಿಕೆ ನೀಡಿದೆ. ಅದು ಹೇಗೆ ಅದನ್ನು ಉಲ್ಲಂಘಿಸಲು ಸಾಧ್ಯ. ಹಾಗೇನಾದರೂ ಸರ್ಕಾರ ಮಾಡಲು ಮುಂದಾದರೆ ಒಂದು ಮರವನ್ನೂ ಸಹ ಕತ್ತರಿಸಲು, ಒಂದು ಇಟ್ಟಿಗೆಯನ್ನೂ ಸಹ ಎತ್ತಲು ಅವಕಾಶ ನೀಡುವುದಿಲ್ಲ” ಎಂದು ಮೌಖಿಕವಾಗಿ ಹೇಳಿತು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಈ ಹಿಂದಿನ ವಿಚಾರಣೆ ವೇಳೆ ನೀಡಿರುವ ಮುಚ್ಚಳಿಕೆಗೆ ಸರ್ಕಾರ ಬದ್ಧವಾಗಿದೆ. ಹಿಂದೆ ತಿಳಿಸಿರುವಂತೆ ಪರಿಹಾರ ನಿಗದಿಪಡಿಸುವವರೆಗೆ ರೈತರನ್ನು ತೆರವುಗೊಳಿಸುವುದಿಲ್ಲ. ಪರಿಹಾರ ನಿಗದಿಪಡಿಸಿದ ಬಳಿಕ ಹೈಕೋರ್ಟ್‌ಗೆ ಮಾಹಿತಿ ನೀಡಲಾಗುವುದು. ಹೈಕೋರ್ಟ್‌ ಗಮನಕ್ಕೆ ತಂದ ಬಳಿಕವೇ ಮುಂದಿನ ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದರು.

ಆಗ ನ್ಯಾಯಾಲಯ, ಅರ್ಜಿದಾರರನ್ನು ಕುರಿತು “ಸರಕಾರ ನ್ಯಾಯಾಲಯಕ್ಕೆ ನೀಡಿರುವ ಮುಚ್ಚಳಿಕೆಯಂತೆ ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ, ಮರ ಕಡಿಯುವುದಿಲ್ಲ. ಹೀಗಾಗಿ ಆತಂಕಪಡಬೇಕಾಗಿಲ್ಲ” ಎಂದು ಅಭಿಪ್ರಾಯಪಟ್ಟು ಸರ್ಕಾರದ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಿಕೊಂಡು ವಿಚಾರಣೆಯನ್ನು ಮುಂದೂಡಿತು.

ಬಿಡದಿಯಲ್ಲಿ ಗ್ರೇಟರ್‌ ಬೆಂಗಳೂರು ಸಮಗ್ರ ಟೌನ್‌ಶಿಪ್‌ ಯೋಜನೆಗಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಹತ್ತು ಗ್ರಾಮಗಳಿಗೆ ಸೇರಿದ 6,650 ಎಕರೆ ಭೂಮಿ ಒಳಗೊಂಡು 7,481 ಎಕರೆಯನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಇದರಿಂದ ಸಾವಿರಾರು ಗ್ರಾಮದ ಜನರು ನಿರ್ಗತಿಕರಾಗುತ್ತಾರೆ. 2015ರಲ್ಲಿ38 ಗ್ರಾಮಗಳನ್ನು ಅಧಿಸೂಚನೆಗೆ ಒಳಪಡಿಸಲಾಗಿತ್ತು. ಆನಂತರ ಬಿಡದಿ ಟೌನ್‌ಶಿಪ್‌ ಅನ್ನು ಪ್ರಾಯೋಗಿಕ ಯೋಜನೆಯನ್ನಾಗಿ ಮಾಡಲು ನಿರ್ಧರಿಸಿ, ಉಳಿದ ಯೋಜನೆಗಳನ್ನು ಕೈಬಿಟ್ಟಿತ್ತು. 2006ರಲ್ಲಿಟೌನ್‌ಶಿಪ್‌ ಪ್ರಸ್ತಾವ ಚಾಲ್ತಿಗೆ ಬಂದಿದ್ದು, ಇದರಿಂದಾಗಿ ಈ ಪ್ರದೇಶವು ಎರಡು ದಶಕದಿಂದ ಅಭಿವೃದ್ಧಿ ಕಂಡಿಲ್ಲ. ಆದರೆ, 2023ರಲ್ಲಿಯಾವುದೇ ನೈಜ ಸಾರ್ವಜನಿಕ ಉದ್ದೇಶವಿಲ್ಲದೆ ಹಳೆಯ ಯೋಜನೆಗೆ ಸ್ಮಾರ್ಟ್‌ ಹೆಸರು ನೀಡುವ ಮೂಲಕ ಅದನ್ನು ಚಾಲ್ತಿಗೆ ತರಲು ಯತ್ನಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಲಾಭ ಮಾಡಿಕೊಳ್ಳುವ ಸಲುವಾಗಿ ಸಾರ್ವಜನಿಕ ಉದ್ದೇಶದ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಸುಮಾರು 3,00,000 ಮರಗಳನ್ನು ಕಡಿಯಬೇಕಾಗುತ್ತದೆ. ಇದು ಗಂಭೀರ ಪರಿಸರ ಪರಿಣಾಮಗಳಿಗೆ ಕಾರಣವಾಗುತ್ತದೆ ಮತ್ತು ಸಾವಿರಾರು ನಿವಾಸಿಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯದ ಮುಂದೆ ಮಂಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸರಕಾರವು ಗ್ರೇಟರ್‌ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಯೋಜನೆಗೆ ಹೊರಡಿಸಿರುವ ಭೂ ಸ್ವಾಧೀನ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.