Big Boss Kannada
Big Boss Kannada 
ಸುದ್ದಿಗಳು

ಬಿಗ್‌ ಬಾಸ್‌: ಬಾಲಾಜಿ ಪೋತರಾಜು ವಿರುದ್ಧ ಮಾನಹಾನಿ ಹೇಳಿಕೆ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ಪ್ರತಿಬಂಧಕಾದೇಶ

Bar & Bench

ಬಿಗ್‌ ಬಾಸ್‌ ಕನ್ನಡ ಅವತರಣಿಕೆಯಲ್ಲಿ ಸ್ಪರ್ಧಿಯಾಗಿರುವ ಚೈತ್ರಾ ಪೋತರಾಜ್‌ (ಚೈತ್ರಾ ಹಳ್ಳಿಕೇರಿ) ಅವರು ತಮ್ಮ ಪತಿ ಬಾಲಾಜಿ ಪೋತರಾಜ್‌ ಅವರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಹೇಳಿಕೆ ನೀಡದಂತೆ ಹಾಗೂ ಅಂತಹ ಹೇಳಿಕೆಯನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಚೈತ್ರಾ, ವೂಟ್‌ ಟಿವಿ ನೆಟ್‌ವರ್ಕ್‌ ಮತ್ತು ಕಲರ್ಸ್‌ ಕನ್ನಡ ನ್ಯೂಸ್‌ ಚಾನೆಲ್‌ಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಈಚೆಗೆ ಮಧ್ಯಂತರ ಪ್ರತಿಬಂಧಕಾದೇಶ ನೀಡಿದೆ.

ಬಾಲಾಜಿ ಪೋತರಾಜ್‌ ಅವರು ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆ ನಡೆಸಿದ 26ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ವೈ ಕಲ್ಪನಾ ಅವರು ಈ ಆದೇಶ ಮಾಡಿದ್ದಾರೆ.

ಬಾಲಾಜಿ ಪೋತರಾಜು ಮತ್ತು ಚೈತ್ರಾ ಅವರೊಂದಿಗಿನ ಪೋತರಾಜು ಅವರ ವೈವಾಹಿಕ ವಿಚಾರಗಳು, ಘನತೆಗೆ ಕುಂದುಂಟು ಮಾಡುವ ಅಥವಾ ಕುಹಕವಾಡುವ ಉಲ್ಲೇಖ ಅಥವಾ ಪ್ರತಿಕ್ರಿಯೆಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಬಾರದು ಎಂದು ತಾತ್ಕಾಲಿಕ ಪ್ರತಿಬಂಧಕಾದೇಶಲ್ಲಿ ನ್ಯಾಯಾಲಯ ಉಲ್ಲೇಖ ಮಾಡಿದೆ.

ಮುಂದುವರಿದು, ಫಿರ್ಯಾದಿಯಾದ ಬಾಲಾಜಿ ಪೋತರಾಜು ಅವರು ನಾಗರಿಕ ಪ್ರಕ್ರಿಯಾ ಸಂಹಿತೆ ನಿಯಮ 3(ಎ) ಅಡಿ ಆದೇಶ 39ರ ಪ್ರಕಾರ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮಧ್ಯಂತರ ಆದೇಶವು ತೆರವಾಗಲಿದೆ ಎಂದು ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 5ಕ್ಕೆ ಮುಂದೂಡಿದೆ.

Vandana P L, Advocate

ಬಾಲಾಜಿ ಮತ್ತು ಚೈತ್ರಾ ಅವರು ದಂಪತಿಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಚೈತ್ರಾ ಅವರು ಪ್ರಸಕ್ತ ಸಾಲಿನ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾಗಿದ್ದರಿಂದ ಚೈತ್ರಾ ಮತ್ತು ಬಾಲಾಜಿ ಅವರು ಕಳೆದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ಈಗ ಚೈತ್ರಾ ಅವರು ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಬಾಲಾಜಿ ಅವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ತಮ್ಮ ಘನತೆಗೆ ಚ್ಯುತಿ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡುವುದು ಮತ್ತು ಅದನ್ನು ಪ್ರಸಾರ ಮಾಡುವುದಕ್ಕೆ ತಡೆ ನೀಡಬೇಕು ಎಂದು ಬಾಲಾಜಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನು ನ್ಯಾಯಾಲಯವು ಮಾನ್ಯ ಮಾಡಿದೆ.

ಅರ್ಜಿದಾರ ಬಾಲಾಜಿ ಅವರನ್ನು ವಕೀಲೆ ಪಿ ಎಲ್‌ ವಂದನಾ ಅವರು ಪ್ರತಿನಿಧಿಸಿದ್ದರು.