ಸುದ್ದಿಗಳು

ಮುಸ್ಲಿಮರಿಗೆ ಮಾತ್ರವೇ ದ್ವಿಪತ್ನಿತ್ವಕ್ಕೆ ಅವಕಾಶ ಏಕೆ? ಐಪಿಸಿ, ಷರಿಯತ್‌ ಪ್ರಶ್ನಿಸಿ ಸುಪ್ರೀಂನಲ್ಲಿ ಮನವಿ

Bar & Bench

ಇತರೆ ಧಾರ್ಮಿಕ ಸಮುದಾಯಗಳಿಗೆ ನಿಷೇಧ ಹೇರಿ ಒಂದು ಧಾರ್ಮಿಕ ಸಮುದಾಯಕ್ಕೆ ಮಾತ್ರ ದ್ವಿಪತ್ನಿತ್ವಕ್ಕೆ ಅವಕಾಶ ಮಾಡಿಕೊಡಲಾಗದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದ್ದು, ಸದರಿ ಆಚರಣೆಯು ಅಸಾಂವಿಧಾನಿಕ, ಮಹಿಳಾ ಸಮುದಾಯದ ಮೇಲಿನ ದೌರ್ಜನ್ಯವಾಗಿದ್ದು, ಸಮಾನತೆಗೆ ವಿರುದ್ಧ ಎಂದು ಘೋಷಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ.

ಐವರು ಅರ್ಜಿದಾರರು ಪ್ರತ್ಯೇಕವಾಗಿ ವಕೀಲ ವಿಷ್ಣು ಶಂಕರ್‌ ಜೈನ್‌ ಮೂಲಕ ಮನವಿ ಸಲ್ಲಿಸಿದ್ದು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 494 ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್‌) ಅನ್ವಯ‌ ಕಾಯಿದೆ 1937 ರ ಅಡಿ ಮುಸ್ಲಿಮ್‌ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶ ಮಾಡಿಕೊಡುವುದನ್ನು ಅಸಾಂವಿಧಾನಿಕ ಎಂದು ಘೋಷಿಷಬೇಕು ಎಂದು ಮನವಿ ಮಾಡಲಾಗಿದೆ.

“ತಮ್ಮ ಜೀವಿತಾವಧಿಯಲ್ಲಿ ಹಿಂದೂ, ಮುಸ್ಲಿಂ ಅಥವಾ ಪಾರ್ಸಿ ಸಮುದಾಯದ ಸಂಗಾತಿ ಎರಡನೇ ವಿವಾಹವಾದರೆ ಐಪಿಸಿ ಸೆಕ್ಷನ್‌ 494ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ, ಅದೇ ಕಾನೂನು ಮುಸ್ಲಿಮ್‌ ಸಮುದಾಯಕ್ಕೆ ಅನ್ವಯಿಸುವುದಿಲ್ಲ. ಸೆಕ್ಷನ್‌ 494 ಧರ್ಮದ ಆಧಾರದಲ್ಲಿ ಮಾತ್ರ ತಾರತಮ್ಯ ಮಾಡುತ್ತದೆ. ಇದು ಸಂವಿಧಾನದ 14 ಮತ್ತು 15(1) ನೇ ವಿಧಿಯ ಉಲ್ಲಂಘನೆಯಾಗಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಐಪಿಸಿ ಸೆಕ್ಷನ್‌ 494ರ ಅಡಿ ಪತಿ ಅಥವಾ ಪತ್ನಿ ಜೀವಂತವಾಗಿ ಬದುಕಿರುವಾಗ ತಮ್ಮ ಜೀವಿತಾವಧಿಯಲ್ಲಿ ಮತ್ತೊಂದು ವಿವಾಹವಾದರೆ ಅದು ಅಕ್ರಮವಾಗಲಿದ್ದು, ಇದು ಶಿಕ್ಷಾರ್ಹ ಅಪರಾಧವಾಗಲಿದೆ. ಇದಕ್ಕೆ ಗರಿಷ್ಠ ಏಳು ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತದೆ.

ಐಪಿಸಿ ಸೆಕ್ಷನ್‌ 494ರಲ್ಲಿ, "ಇದಾಗಲೇ ಪತಿ ಅಥವಾ ಪತ್ನಿಯನ್ನು ಹೊಂದಿದ್ದು, ಅವರು ಬದುಕಿರುವಾಗಲೇ ವ್ಯಕ್ತಿಯು ಮತ್ತೊಂದು ಮದುವೆಯಾದರೆ ಹಾಗೂ ಅಂತಹ ಮದುವೆಯು ಪತಿ ಅಥವಾ ಪತ್ನಿ ಬದುಕಿರುವಾಗಲೇ ಘಟಿಸಿದ ಕಾರಣಗಳಿಂದಾಗಿ ಅಸಿಂಧು ಎಂದಾದರೆ, ಆಗ ಆ ವ್ಯಕ್ತಿಗೆ ಏಳು ವರ್ಷಗಳ ಕಾಲ ಸೆರೆವಾಸವನ್ನು ಹಾಗೂ ದಂಡವನ್ನು ವಿಧಿಸಲಾಗುವುದು," ಎನ್ನಲಾಗಿದೆ. ಇಲ್ಲಿ, 'ಘಟಿಸುವ ಕಾರಣಗಳಿಂದಾಗಿ ಅಸಿಂಧು' ಎನ್ನುವುದು ಆಯಾ ಧರ್ಮಗಳ ವೈಯಕ್ತಿಕ ಕಾನೂನನ್ನು ಹಿನ್ನೆಲೆಯಾಗಿರಿಸಿಕೊಂಡು ಹೇಳಿರುವಂತಹದ್ದಾಗಿದೆ.

ಹಾಗಾಗಿ, ಐಪಿಸಿಯ ಸೆಕ್ಷನ್ 494ರಲ್ಲಿರುವ "ಅಂತಹ ಮದುವೆಗಳು ತಾವು ಘಟಿಸುವ ಕಾರಣಗಳಿಂದಾಗಿಯೇ ಅಸಿಂಧುವಾಗುತ್ತವೆ" ಎನ್ನುವ ಪದಗಳನ್ನು ತೆಗೆದುಹಾಕುವಂತೆ ಅರ್ಜಿದಾರರು ಕೋರಿದ್ದಾರೆ.

ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಅವಕಾಶ ಇರುವುದರಿಂದ ಸೆಕ್ಷನ್‌ 494 ದ್ವಿಪತ್ನಿತ್ವಕ್ಕೆ ಭದ್ರತೆ ನೀಡುತ್ತದೆ. ಮುಸ್ಲಿಮರ ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್‌) ಅನ್ವಯ ಕಾಯಿದೆ 1937ರ ಸೆಕ್ಷನ್‌ 2 ನಲ್ಲಿ ಉಲ್ಲೇಖಿಸಲಾಗಿದೆ.

“ಮೇಲೆ ಹೇಳಲಾದ ನಿಬಂಧನೆಯಿಂದ ಸ್ಪಷ್ಟವಾಗುವುದು ಏನೆಂದರೆ ಎರಡನೇ ವಿವಾಹ ಅಕ್ರಮವಾದಾಗ ಮಾತ್ರ ದ್ವಿಪತ್ನಿತ್ವವು ಶಿಕ್ಷಾರ್ಹ ಅಪರಾಧವಾಗುತ್ತದೆ. ಎರಡನೇ ವಿವಾಹದ ಸಿಂಧುತ್ವವು ವೈಯಕ್ತಿಕ ಕಾನೂನಿನ ಅಡಿ ಗುರುತಿಸುವುದನ್ನು ಅವಲಂಬಿಸಿರುತ್ತದೆ. ಹಿಂದೂ, ಕಿಶ್ಚಿಯನ್‌ ಅಥವಾ ಪಾರ್ಸಿಗಳು ಜೀವಿತಾವಧಿಯಲ್ಲಿ ಎರಡನೇ ವಿವಾಹವಾದರೆ ಅದು ಐಪಿಸಿ ಸೆಕ್ಷನ್‌ 494ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಅದೇ ಸಂದರ್ಭದಲ್ಲಿ ಅದನ್ನು ಮುಸ್ಲಿಮರು ಮಾಡಿದರೆ ಶಿಕ್ಷಾರ್ಹವಲ್ಲ. ಆದ್ದರಿಂದ ಸೆಕ್ಷನ್‌ 494 ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ. ಇದು ಸಂವಿಧಾನದ 14 ಮತ್ತು15(1) ವಿಧಿಯ ಉಲ್ಲಂಘನೆಯಾಗಲಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ಧಾರ್ಮಿಕ ಆಚರಣೆಗಳ ತಳಹದಿಯ ಮೇಲೆ ದಂಡ ಕಾರ್ಯವನ್ನು ಬೇರ್ಪಡಿಸಲಾಗದು. ದಂಡ ಸಂಹಿತೆಯನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಅಪರಾಧಿಗೆ ವೈಯಕ್ತಿಕ ಕಾನೂನಿನ ನೆರವು ದೊರೆಯಬಾರದು” ಎಂದು ಹೇಳಲಾಗಿದೆ.

ಮುಸ್ಲಿಂ ವ್ಯಕ್ತಿಯು ಎರಡನೇ ವಿವಾಹವಾಗುವುದು ಕಾನೂನು ಬದ್ಧವಾದರೂ ಅದು ಮೊದಲನೇ ಪತ್ನಿಯ ಮೇಲೆ ಅಗಾಧ ಕ್ರೌರ್ಯ ಎಸಗಿದಂತಾಗುತ್ತದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿತ್ತು. ತ್ರಿವಳಿ ತಲಾಖ್‌ ಸಂವಿಧಾನಬಾಹಿರ ಎಂದು 2017ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಮಹತ್ವದ ತೀರ್ಪು ನೀಡಿತ್ತು.