Nitish Kumar
Nitish Kumar Facebook
ಸುದ್ದಿಗಳು

ನ್ಯಾಯಾಂಗ ಸೇವೆ, ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಶೇ 10ರಷ್ಟು ಮೀಸಲಾತಿ ಘೋಷಿಸಿದ ಬಿಹಾರ ಸರ್ಕಾರ

Bar & Bench

ನ್ಯಾಯಾಂಗ ಸೇವೆಯಲ್ಲಿ ಹಾಗೂ ಸರ್ಕಾರಿ ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಒದಗಿಸಲು ಬಿಹಾರ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ ಸಿದ್ಧಾರ್ಥ ಅವರು ಈ ವಿಚಾರ ತಿಳಿಸಿರುವುದು ವರದಿಯಾಗಿದೆ. ಸಂಬಂಧಪಟ್ಟ ಇಲಾಖೆಯು ಶೀಘ್ರದಲ್ಲೇ ಎಲ್ಲಾ ವಿವರಗಳೊಂದಿಗೆ ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಸಿದ್ಧಾರ್ಥ ಹೇಳಿದ್ದಾರೆ.

ಬಿಹಾರ ಜಾತಿ ಸಮೀಕ್ಷೆಯ ಮೊದಲ ಹಂತದ ಮಾಹಿತಿಯನ್ನು ಸೋಮವಾರ ಬಿಡುಗಡೆ ಮಾಡಿದ ನಂತರ ರಾಜ್ಯ ಸರ್ಕಾರ ಈ ನಿರ್ಧಾರ ತಳೆದಿದೆ.ಮಾಹಿತಿಯ ಪ್ರಕಾರ, ಅತ್ಯಂತ ಹಿಂದುಳಿದ ಸಮುದಾಯಗಳು (ಇಬಿಸಿಗಳು) ಜನಸಂಖ್ಯೆಯ ಶೇ 36.01ರಷ್ಟಿದ್ದರೆ, ಹಿಂದುಳಿದ ವರ್ಗಗಳು ಹೆಚ್ಚುವರಿ ಶೇ 27.12ರಷ್ಟಿವೆ. ಒಟ್ಟಾರೆಯಾಗಿ ಹಿಂದುಳಿದ ವರ್ಗಗಳು ಮತ್ತು ಇಬಿಸಿ ವರ್ಗಗಳನ್ನು ಒಳಗೊಂಡ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ರಾಜ್ಯದ ಜನಸಂಖ್ಯೆಯ ಶೇ 63.13% ರಷ್ಟಿದೆ.

ಗಮನಾರ್ಹ ಅಂಶವೆಂದರೆ, ಜಾತಿ ಸಮೀಕ್ಷೆ ಕೈಗೊಳ್ಳುವ ರಾಜ್ಯ ಸರ್ಕಾರದ ನಿರ್ಧಾರ ಸಂಪೂರ್ಣ ನ್ಯಾಯೋಚಿತವಾಗಿದ್ದು, ನ್ಯಾಯಯುತ ಅಭಿವೃದ್ಧಿಯನ್ನು ಸಾಕಾರಗೊಳಿಸುವ ಕಾನೂನಾತ್ಮಕ ಉದ್ದೇಶದಿಂದ ಸೂಕ್ತ ಅಧಿಕಾರದೊಂದಿಗೆ ಆರಂಭಿಸಲಾಗಿದೆ ಎಂದು ಪಾಟ್ನಾ ಹೈಕೋರ್ಟ್‌ ಹೇಳಿತ್ತು.

ಬಲವಾದ ಸಾರ್ವಜನಿಕ ಹಿತಾಸಕ್ತಿ ಮತ್ತು ನ್ಯಾಯಸಮ್ಮತವಾದ ಪ್ರಭುತ್ವದ ಹಿತಾಸಕ್ತಿಯನ್ನು ವೃದ್ಧಿಸುವುದರಿಂದ ಈ ಕ್ರಮ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಅವರಿದ್ದ ಪೀಠ ತೀರ್ಪು ನೀಡಿತ್ತು.

ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣದ ವಿಚಾರಣೆ ಇನ್ನೂ ಅಲ್ಲಿ ಬಾಕಿ ಉಳಿದಿದೆ. ಆ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 6 ರಂದು ನಡೆಯುವ ಸಾಧ್ಯತೆಯಿದೆ.