Bihar and Supreme Court 
ಸುದ್ದಿಗಳು

ಮೀಸಲಾತಿ ಹೆಚ್ಚಳ ರದ್ದು: ಪಾಟ್ನಾ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಬಿಹಾರ ಸರ್ಕಾರ

ಮೀಸಲಾತಿ ವರ್ಗಗಳ ಒಟ್ಟು ಮೀಸಲಾತಿಯನ್ನು 2023ರಲ್ಲಿ ಶೇ 65ಕ್ಕೆ ಹೆಚ್ಚಿಸಲಾಯಿತು. ಈ ನಿರ್ಧಾರದಿಂದಾಗಿ ಸಾಮಾನ್ಯ ಅರ್ಹತೆಯ ವರ್ಗದವರಿಗೆ ಇದ್ದ ಅವಕಾಶ ಶೇ 35ಕ್ಕೆ ಇಳಿದಿತ್ತು. ಈ ಕಾಯಿದೆಯನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿತ್ತು.

Bar & Bench

ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್ಸಿ/ಎಸ್ಟಿ) ಇದ್ದ ಶೇಕಡಾ 50ರಷ್ಟು ಮೀಸಲಾತಿಯನ್ನು ಶೇ 65 ಕ್ಕೆ ಹೆಚ್ಚಿಸಲು 2023ರಲ್ಲಿ ಬಿಹಾರ ಶಾಸಕಾಂಗ ಅಂಗೀಕರಿಸಿದ್ದ ತಿದ್ದುಪಡಿಗಳನ್ನು ಪಾಟ್ನಾ ಹೈಕೋರ್ಟ್ ಈಚೆಗೆ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ತಿದ್ದುಪಡಿ ಮಾಡಲಾದ ಕಾಯಿದೆಗಳು ಉದ್ಯೋಗ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ವಂಚಿಸುತ್ತಿವೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ತೀರ್ಪಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ ಮತ್ತು ಸಂವಿಧಾನದ 14, 15 ಮತ್ತು 16ನೇ ವಿಧಿಯಡಿ ಒದಗಿಸಲಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಹರೀಶ್ ಕುಮಾರ್ ಅವರಿದ್ದ ಪಾಟ್ನಾ ಹೈಕೋರ್ಟ್ ವಿಭಾಗೀಯ ಪೀಠವು ಹುದ್ದೆಗಳು ಮತ್ತು ಸೇವೆಗಳಲ್ಲಿ ಖಾಲಿ ಹುದ್ದೆಗಳ ಬಿಹಾರ ಮೀಸಲಾತಿ (ತಿದ್ದುಪಡಿ) ಕಾಯಿದೆ, 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ) ಮೀಸಲಾತಿ (ತಿದ್ದುಪಡಿ) ಕಾಯಿದೆ, 2023 ಅನ್ನು ಬದಿಗೆ ಸರಿಸಿತ್ತು.

ಸರ್ಕಾರಿ ಸೇವೆಯಲ್ಲಿ ತುಲನಾತ್ಮಕವಾಗಿ ಎಸ್‌ಸಿ, ಎಸ್‌ ಟಿ ಮತ್ತು ಹಿಂದುಳಿದ ವರ್ಗಗಳ ಸದಸ್ಯರ ಸಂಖ್ಯೆ ಕಡಿಮೆ ಇದೆ ಎಂಬ ದತ್ತಾಂಶ ಆಧರಿಸಿ ಶಾಸಕಾಂಗ 1991ರ ಕಾಯಿದೆಗೆ ತಿದ್ದುಪಡಿ ಮಾಡಿತ್ತು.

ಅದರಂತೆ ಮೀಸಲಾತಿ ವರ್ಗಗಳ ಒಟ್ಟು ಮೀಸಲಾತಿಯನ್ನು 2023ರಲ್ಲಿ ಶೇ 65ಕ್ಕೆ ಹೆಚ್ಚಿಸಲಾಗಿತ್ತು. ಈ ನಿರ್ಧಾರದಿಂದಾಗಿ ಸಾಮಾನ್ಯ ಅರ್ಹತೆಯ ವರ್ಗದವರಿಗೆ ಇದ್ದ ಅವಕಾಶ ಶೇ 35ಕ್ಕೆ ಇಳಿದಿತ್ತು.

ಹಿಂದುಳಿದ ಸಮುದಾಯಗಳು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ಮತ್ತು ಅರ್ಹತೆಯ ಕಾರಣದಿಂದ ಸಾಕಷ್ಟು ಪ್ರಾತಿನಿಧ್ಯವನ್ನು ಪಡೆದಿರುವುದನ್ನು ಸರ್ಕಾರವೇ ಅವಲಂಬಿಸಿರುವ ಜಾತಿ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತರ್ಕಿಸಿತ್ತು.

ಇದು ಒಂದಿಲ್ಲೊಂದು ಜಾತಿ ಅಥವಾ ಸಮುದಾಯ ಮೀಸಲಾತಿಯ ಲಾಭ ಪಡೆದಿದ್ದು ಸಾಮಾಜಿಕ ನಿಧಿಯ ಅಂಶವನ್ನು ಸಾಧಿಸುವಲ್ಲಿ ಪ್ರಭುತ್ವ ಜಾರಿಗೊಳಿಸಿದ ವಿವಿಧ ಕಲ್ಯಾಣ ಯೋಜನೆಗಳ ಸೂಚನೆಯಾಗಿದೆ ಎಂದು ಅದು ಅಭಿಪ್ರಾಯಪಟ್ಟಿತ್ತು.

ಶೇ 50 ರಷ್ಟು ಮಿತಿಯೊಳಗೆ ಮೀಸಲಾತಿ ನೀಡುವ ಕುರಿತಂತೆ ಸರ್ಕಾರ ಆತ್ಮಾಲೋಕನ ಮಾಡಿಕೊಳ್ಳಬೇಕು ಮತ್ತು ಸೌಲಭ್ಯಗಳಿಂದ 'ಕೆನೆ ಪದರ' ವರ್ಗವನ್ನು ಹೊರಗಿಡಬೇಕು ಎಂದು ಹೈಕೋರ್ಟ್ ಹೇಳಿತ್ತು. ಇದನ್ನು ಇದೀಗ ಸುಪ್ರೀಂ ಕೋರ್ಟಿನಲ್ಲಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಲಾಗಿದೆ.