ಬೆಂಗಳೂರಿನ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಡೀಫಾಲ್ಟ್ ಜಾಮೀನು ಮಂಜೂರು ಮಾಡಿದೆ. ನಿನ್ನೆಯಷ್ಟೇ ಬೆಂಗಳೂರಿನ ವಿಶೇಷ ನ್ಯಾಯಾಲಯವು ಪ್ರಕರಣದ ಪ್ರಮುಖ ಆರೋಪಿ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜಗೆ ಜಾಮೀನು ಮಂಜೂರು ಮಾಡಿತ್ತು.
ಆರೋಪಿಗಳಾದ ಪಿ ಜಗದೀಶ್, ಕೆ ಕಿರಣ್, ವಿ ವಿಮಲ್ ರಾಜ್ ಮತ್ತು ಆರ್ ಮದನ್‌ಗೆ ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ. ನಿಗದಿ ಅವಧಿಯಲ್ಲಿ ತನಿಖಾಧಿಕಾರಿಗಳು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸದೇ ಇರುವುದರಿಂದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಆರೋಪಿಗಳು ತಲಾ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು. ಸಾಕ್ಷ್ಯ ನಾಶ ಮಾಡಬಾರದು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ನಿವಾಸ ಬದಲಿಸಿದರೆ ಅದರ ವಿಳಾಸವನ್ನು ತನಿಖಾಧಿಕಾರಿಗೆ ನೀಡಬೇಕು. ಸಕ್ಷಮ ನ್ಯಾಯಾಲಯದ ಅನುಮತಿ ಪಡೆಯದೇ ರಾಜ್ಯ ತೊರೆಯುವಂತಿಲ್ಲ. ಈ ಷರತ್ತಿನಲ್ಲಿ ಯಾವುದಾದರೂ ಒಂದು ಉಲ್ಲಂಘನೆಯಾದರೂ ಜಾಮೀನು ರದ್ದಾಗಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಅಲ್ಲದೇ, ಕಳೆದ ತಿಂಗಳು ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರವು ಕೋಕಾ ಕಾಯಿದೆ ಅನ್ವಯಿಸಿದ್ದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಆರೋಪಿಗಳು ಜಾಮೀನು ಕೋರಿದ್ದರು. ಈಗ ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಅನ್ವಯ ಆದೇಶ ವಜಾಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯು ಸುಪ್ರೀಂ ಕೋರ್ಟ್ ವಿಚಾರಣೆಗೆ ಬಾಕಿ ಇದೆ.
ಈ ನಡುವೆ ಮಾರ್ಚ್ 3ರಂದು ಅರ್ಜಿದಾರ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯು ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ಅದನ್ನು ಪದೇಪದೇ ಮುಂದೂಡುವುದು ಆರೋಪಿಗಳು ಜೈಲಿನಲ್ಲಿ ಕೊಳೆಯುವುದು ಮುಂದುವರಿಸಲಿದೆ. ಹೀಗಾಗಿ, ಒಂದೊಮ್ಮೆ ಸುಪ್ರೀಂ ಕೋರ್ಟ್ ಕೋಕಾ ಅನ್ವಯಿಸಿರುವ ಸರ್ಕಾರದ ಆದೇಶವನ್ನು ಎತ್ತಿ ಹಿಡಿದರೆ ಮುಂದಿನ ಪ್ರಕ್ರಿಯೆಯನ್ನು ಅರ್ಜಿದಾರರು/ಆರೋಪಿಗಳು ಪಾಲಿಸಬೇಕು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಪಟ್ಟು, ಷರತ್ತುಗಳನ್ನು ವಿಧಿಸಿ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಈಗಾಗಲೇ ಅರ್ಜಿದಾರರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, 100ಕ್ಕೂ ಹೆಚ್ಚು ದಿನಗಳಿಂದ ಆರೋಪಿಗಳು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಪಟ್ಟು ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.
ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಆರೋಪಿಗಳ ಪೈಕಿ ಒಬ್ಬಾತ ವಿದೇಶಕ್ಕೆ ತೆರಳಿ, ಆನಂತರ ಬಹಳ ದಿನಗಳ ಬಳಿಕ ವಾಪಸ್ ಆಗಿದ್ದಾನೆ. ಕೋಕಾ ಕಾಯಿದೆ ಅನ್ವಯ ರದ್ದುಪಡಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲಾಗಿದ್ದು, ಸುಪ್ರೀಂ ಕೋರ್ಟ್ ಸರ್ಕಾರದ ಆದೇಶ ಎತ್ತಿಹಿಡಿದರೆ ಜಾಮೀನು ರದ್ದಾಗಲಿದೆ. ಅದು ನಿರ್ಧಾರದ ಬಳಿಕ ಜಾಮೀನು ಮಂಜೂರಾತಿ ನಿರ್ಧರಿಸಬೇಕು. ಈಗ ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕು” ಎಂದು ಕೋರಿದರು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ತಮ್ಮ ಮನೆಯ ಮುಂದೆ 15.07.2025ರಂದು 8-9 ಮಂದಿ ತನ್ನ ಪುತ್ರ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಭಾರತೀನಗರ ಠಾಣೆಯಲ್ಲಿ ಶಿವನ ತಾಯಿ ವಿಜಯಲಕ್ಷ್ಮಿ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಬೈರತಿ ಬಸವರಾಜು ಸೇರಿದಂತೆ 19 ಮಂದಿಯ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 61, 189(2), (4), 103, 118(1), 190, 111(2)(a), 111(2)(b), 111(3), 111(4), 238 ಜೊತೆಗೆ ಸೆಕ್ಷನ್ 3(5) ಅಡಿ ಪ್ರಕರಣ ದಾಖಲಿಸಿದ್ದಾರೆ.