A1
A1
ಸುದ್ದಿಗಳು

ಬಿಲ್ಕಿಸ್ ಬಾನೊ ಪ್ರಕರಣ: ಶಿಕ್ಷೆ ತಗ್ಗಿಸಲು ಕೋರುವುದು ಮೂಲಭೂತ ಹಕ್ಕೇ ಎಂದು ಅಪರಾಧಿಗಳನ್ನು ಪ್ರಶ್ನಿಸಿದ ಸುಪ್ರೀಂ

Bar & Bench

ತನ್ನ ಜೈಲು ಶಿಕ್ಷೆ ತಗ್ಗಿಸುವಂತೆ ಕೋರುವ ಅಪರಾಧಿಯ ಹಕ್ಕು ಸಂವಿಧಾನದ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರುತ್ತದೆಯೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ [ಬಿಲ್ಕಿಸ್ ಯಾಕೂಬ್ ರಸೂಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆ ಕೇಳಿದೆ.

ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ಶಿಕ್ಷೆ ಮಾಫಿ ಮಾಡಿ ಅವಧಿಪೂರ್ವ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ದೋಷಿಗಳು ಸೆರೆವಾಸದಿಂದ ವಿನಾಯಿತಿ ಕೋರಿ 32ನೇ ವಿಧಿ ಅರ್ಜಿಯನ್ನು (ಮೂಲಭೂತ ಹಕ್ಕು ಜಾರಿಗಾಗಿ ಸಲ್ಲಿಸಲಾಗಿದೆ) ಸಲ್ಲಿಸಬಹುದೇ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಪ್ರಶ್ನಿಸಿತು.

ವಿಚಾರಣೆ ವೇಳೆ ನ್ಯಾ ಭುಯಾನ್‌ ಅವರು “ (ಅಪರಾಧಿ ಸಲ್ಲಿಸಿರುವ) 32 ನೇ ವಿಧಿ ಅರ್ಜಿ ಪ್ರಕರಣದಲ್ಲಿ ಅನ್ವಯವಾಗುತ್ತದೆಯೇ? ಶಿಕ್ಷೆಯನ್ನು ತಗ್ಗಿಸಲು ಕೋರುವ ಹಕ್ಕು ಮೂಲಭೂತ ಹಕ್ಕಾಗಿದೆಯೇ?" ಎಂದು ಪ್ರಶ್ನಿಸಿದರು. ಈ ವೇಳೆ ಅಪರಾಧಿಯೊಬ್ಬರ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ವಿ.ಚಿತಾಂಬರೇಶ್ “ಪರಿಹಾರ ಕೋರುವುದು ಮೂಲಭೂತ ಹಕ್ಕಲ್ಲದ ಕಾರಣ ಅದು ಅನ್ವಯವಾಗದು. ತಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದ ಕಾರಣ ಪರಿಹಾರವನ್ನು ಪ್ರಶ್ನಿಸಿರುವ ಅರ್ಜಿದಾರರು ಅಂತಹ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದರು.

ಪ್ರಕರಣದ ವಿಚಾರಣೆ ಅಕ್ಟೋಬರ್ 4ರಂದು ಮಧ್ಯಾಹ್ನ 2 ಗಂಟೆಗೆ ಮುಂದುವರಿಯಲಿದ್ದು, ಅರ್ಜಿದಾರರ ಪ್ರತ್ಯುತ್ತರ ವಾದಗಳನ್ನು ಆಲಿಸಿ ಆ ಬಳಿಕ ತೀರ್ಪನ್ನು ಕಾಯ್ದಿರಿಸುವ ಸಾಧ್ಯತೆಯಿದೆ.

ಸುಪ್ರೀಂ ಕೋರ್ಟ್‌ ಮೇ 2022ರಲ್ಲಿ ನೀಡಿದ್ದ ತೀರ್ಪಿನ ನಂತರ ಅಪರಾಧಿಗಳಲ್ಲಿ ಒಬ್ಬನಾದ ರಾಧೇಶ್ಯಾಂ ಸಲ್ಲಿಸಿದ್ದ 32ನೇ ವಿಧಿ ಅರ್ಜಿಯ ಹಿನ್ನೆಲೆಯಲ್ಲಿ  ಗುಜರಾತ್ ಸರ್ಕಾರ ಪ್ರಕರಣದ 11 ಅಪರಾಧಿಗಳಿಗೆ ವಿನಾಯಿತಿ ನೀಡಿತ್ತು. ಇದನ್ನು ಪ್ರಶ್ನಿಸಿ ಅತ್ಯಾಚಾರ ಸಂತ್ರಸ್ತೆ ಬಾನೊ ಸಲ್ಲಿಸಿದ್ದ ಅರ್ಜಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸೇರಿದಂತೆ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.