ಗುಜರಾತ್ ಕೋಮುಗಲಭೆ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಬಾನೊ ಅವರ ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿತವಾಗಿರುವ ಇಬ್ಬರ ಜಾಮೀನು ಅರ್ಜಿ ವಿಚಾರಣೆಗೆ ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಶಿಕ್ಷೆ ತಗ್ಗಿಸಿ ಅವಧಿಪೂರ್ವ ಬಿಡುಗಡೆ ವಿಚಾರವಾಗಿ ತಮ್ಮ ಕೋರಿಕೆಯ ಸಂಬಂಧ ತಾವು ಹೊಸದಾಗಿ ಸಲ್ಲಿಕೆ ಮಾಡಿರುವ ಅರ್ಜಿಯ ಕುರಿತಾಗಿ ತೀರ್ಮಾನ ಕೈಗೊಳ್ಳುವವರೆಗೆ ಮಧ್ಯಂತರ ಜಾಮೀನು ಕೋರಿ ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್ ಭಗವಾನ್‌ದಾಸ್ ಮತ್ತು ರಾಜುಭಾಯ್ ಬಾಬುಲಾಲ್ ಸೋನಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿ ವಿ ಸಂಜಯ್ ಕುಮಾರ್ ಅವರ ವಿಭಾಗೀಯ ಪೀಠವು ಅಪರಾಧಿಗಳಿಗೆ ಅಂಥ ಯಾವುದೇ ಪ್ರಯೋಜನ ದೊರೆಯುವಂತೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
“ಏನಿದು ಅರ್ಜಿ? ಇದನ್ನು ಹೇಗೆ ನಿರ್ವಹಣೆ ಮಾಡಲು ಸಾಧ್ಯ? ಸಂಪೂರ್ಣವಾಗಿ ತಪ್ಪಾದ ಅರ್ಥೈಸುವಿಕೆಯಿಂದ ಸಲ್ಲಿಕೆಯಾಗಿದೆ. ಸಂವಿಧಾನದ 32ನೇ ವಿಧಿಯ ವಿಚಾರದಲ್ಲಿ ನಾವು ಮೇಲ್ಮನವಿ ಆಲಿಸಲು ಹೇಗೆ ಸಾಧ್ಯ?” ಎಂದು ಪೀಠ ಪ್ರಶ್ನಿಸಿತು. ಅಂತಿಮವಾಗಿ ಇಬ್ಬರೂ ಅಪರಾಧಿಗಳು ಅರ್ಜಿಯನ್ನು ಹಿಂಪಡೆದರು.
ಈಚೆಗೆ ಕಳೆದ ಜನವರಿಯಲ್ಲಿ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ತಗ್ಗಿಸಿ ಅವಧಿಪೂರ್ವ ಬಿಡುಗಡೆಗೆ ಗುಜರಾತ್ ಸರ್ಕಾರ ಆದೇಶಿಸಿದ್ದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಪ್ರಕರಣದಲ್ಲಿ ಅಪರಾಧಿಗಳ ಶಿಕ್ಷೆ ಪ್ರಮಾಣ ತಗ್ಗಿಸುವ ಅಧಿಕಾರ ಗುಜರಾತ್ ಸರ್ಕಾರಕ್ಕಿಲ್ಲ ಎಂದು ಆದೇಶಿಸಿತ್ತು. ಸುಪ್ರೀಂ ಕೋರ್ಟ್‌ನ ಈ ಆದೇಶ ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ತೀರ್ಪು ಮರುಪರಿಶೀಲನಾ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.