ಜೈಲು ಶಿಕ್ಷೆ ವಿಧಿಸಿರುವವರಿಗೆ ಆಯ್ದ ರೀತಿಯಲ್ಲಿ ಕ್ಷಮಾಪಣಾ ನೀತಿ (ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ) ಅನ್ವಯಿಸಿರುವುದಕ್ಕೆ ಸಂಬಂಧಿಸಿದಂತೆ ಗುಜರಾತ್ ಮತ್ತು ಕೇಂದ್ರ ಸರ್ಕಾರವನ್ನು ಗುರುವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ [ಬಿಲ್ಕಿಸ್ ಯಾಕೂಬ್ ರಸೂಲ್ ವರ್ಸಸ್ ಭಾರತ ಸರ್ಕಾರ ಮತ್ತು ಇತರರು].
ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಕೊಲೆಗೈದ ಪ್ರಕರಣದಲ್ಲಿ ದೋಷಿಗಳಾಗಿದ್ದ 11 ಮಂದಿಗೆ ಕ್ಷಮಾಪಣೆ ನೀಡಿರುವ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಸುಧಾರಣೆ ಮತ್ತು ಸಮಾಜದ ಜೊತೆಗೂಡುವ ಅವಕಾಶವನ್ನು ಪ್ರತಿಯೊಬ್ಬ ಅರ್ಹ ಅಪರಾಧಿಗೂ ನೀಡಬೇಕು ಪೀಠ ಹೇಳಿದೆ. “ಕ್ಷಮಾಪಣಾ ನೀತಿಯನ್ನು ಆಯ್ದ ರೀತಿಯಲ್ಲಿ ಏಕೆ ಅನ್ವಯಿಸಲಾಗುತ್ತಿದೆ? ಸುಧಾರಣೆ ಮತ್ತು ಸಮಾಜದ ಜೊತೆಗೂಡುವ ಅವಕಾಶವನ್ನು ಪ್ರತಿಯೊಬ್ಬ ಅರ್ಹ ಅಪರಾಧಿಗೂ ನೀಡಬೇಕೆ ವಿನಾ ಕೆಲವೇ ಕೆಲವರಿಗಲ್ಲ. ಸಾಮೂಹಿಕ ಎಂಬುದು ಪ್ರಶ್ನೆಯಲ್ಲ. ಆದರೆ, ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷ ಪೂರ್ಣಗೊಳಿಸಿದ ಎಲ್ಲರಿಗೂ ಕ್ಞಮಾಪಣೆ ನೀತಿ ಅನ್ವಯಿಸುವುದೇ?” ಎಂದು ನ್ಯಾ. ನಾಗರತ್ನ ಪ್ರಶ್ನಿಸಿದರು.
2022ರ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಗುಜರಾತ್ ಸರ್ಕಾರವು 11 ಅಪರಾಧಿಗಳಿಗೆ ಕ್ಷಮಾಪಣೆ ನೀಡಿತ್ತು.