Bilkis Bano and SC
Bilkis Bano and SC 
ಸುದ್ದಿಗಳು

ತನ್ನ ಬಿಡುಗಡೆ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿ ವಿರೋಧಿಸಿದ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಆರೋಪಿ

Bar & Bench

ತನ್ನ ಜೀವಾವಧಿ ಶಿಕ್ಷೆ ಹಿಂಪಡೆದಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಗೆ ಇತ್ತೀಚೆಗೆ ಗುಜರಾತ್‌ ಸರ್ಕಾರದಿಂದ ಬಿಡುಗಡೆಯಾಗಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಓರ್ವ ಅಪರಾಧಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮೇ 13, 2022 ರ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ತನ್ನನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಕರಣದ ಅಪರಾಧಿ ರಾಧೇಶ್ಯಾಮ್ ಭಗವಾನದಾಸ್ ಶಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

“ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ 2008ರಲ್ಲಿ ವಿಚಾರಣಾ ನ್ಯಾಯಾಲಯ ದೋಷಾರೋಪ ಮಾಡಿರುವ ಅಂಶವನ್ನು ಈ ಗೌರವಾನ್ವಿತ ನ್ಯಾಯಾಲಯ ಪರಿಗಣಿಸಿದ್ದು ಆ ವೇಳೆ ಜುಲೈ 9, 1992ರ ಗುಜರಾತ್ ಸರ್ಕಾರದ ಅವಧಿ ಪೂರ್ವ ಬಿಡುಗಡೆ ನೀತಿ ಚಾಲ್ತಿಯಲ್ಲಿತ್ತು. ಜುಲೈ 9, 1992 ರ ನೀತಿಯ ಪ್ರಕಾರ ಅವಧಿಪೂರ್ವ ಬಿಡುಗಡೆಗಾಗಿ ಅರ್ಜಿಯನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ” ಎಂದು ಶಾ ಸಲ್ಲಿಸಿದ ಪ್ರತಿ ಅಫಿಡವಿಟ್‌ ಹೇಳಿದೆ.

ಈ ರೀತಿಯ ಬಿಡುಗಡೆ ವಿರೋಧಿಸಿ ಮೂರನೇ ವ್ಯಕ್ತಿ ಅರ್ಜಿ ಸಲ್ಲಿಸುವಂತಿಲ್ಲ ಎಂಬುದು ಈಗಾಗಲೇ ಇತ್ಯರ್ಥಗೊಂಡ ಕಾನೂನಾಗಿದೆ ಎಂದಿರುವ ಶಾ ಅರ್ಜಿದಾರರ ಅರ್ಹತೆಯನ್ನು ಪ್ರಶ್ನಿಸಿದ್ದಾರೆ.

2002ರ ಗೋಧ್ರಾ ಗಲಭೆ ವೇಳೆ ಬಿಲ್ಕಿಸ್ ಬಾನೊ ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ಇತ್ತೀಚೆಗೆ ಕ್ಷಮಾದಾನ ನೀಡಿತ್ತು.

ಸಿಪಿಐ (ಎಂ) ನಾಯಕಿ ಸುಭಾಸಿನಿ ಅಲಿ, ಸ್ವತಂತ್ರ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ರೇವತಿ ಲಾಲ್ ಹಾಗೂ ನಿವೃತ್ತ ಪ್ರಾಧ್ಯಾಪಕಿ ಮತ್ತು ಹೋರಾಟಗಾರ್ತಿ ರೂಪ್ ರೇಖ್ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಸಂಬಂಧಿಸಿದಂತೆ ಗುಜರಾತ್‌ ಸರ್ಕಾರ ಹಾಗೂ 11 ಅಪರಾಧಿಗಳ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಕೇಳಿತ್ತು.

ಪ್ರತಿಕ್ರಿಯೆ ನೀಡಿರುವ ಶಾ “ಅರ್ಜಿ ಸಲ್ಲಿಸಿರುವವರು ಪ್ರಕರಣಕ್ಕೆ ಸಂಬಂಧಿಸಿದವರಲ್ಲ. ಅವರು ಕೇವಲ ರಾಜಕೀಯ ಹೋರಾಟಗಾರರು ಇಲ್ಲವೇ ಅಪರಿಚಿತ ಮೂರನೇ ವ್ಯಕ್ತಿಗಳಾಗಿದ್ದಾರೆ” ಎಂದಿದ್ದಾರೆ.

ವಿಚಾರಣೆಗೆ ಸಂಪೂರ್ಣ ಹೊರತಾಗಿರುವ ಮೂರನೇ ವ್ಯಕ್ತಿಗೆ ಕ್ರಿಮಿನಲ್‌ ಪ್ರಕರಣಗಳಲ್ಲಿ ಯಾವುದೇ ಅರ್ಹತೆ ಇಲ್ಲ ಮತ್ತು ಅವರಿಗೆ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಹಕ್ಕಿಲ್ಲ ಎಂದು ಜನತಾದಳ ಮತ್ತು ಎಚ್‌ಎಸ್‌ ಚೌಧರಿ ನಡುವಣ ಪ್ರಕರಣ, ಸಿಮ್ರಂಜಿತ್ ಸಿಂಗ್ ಮಾನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಹಾಗೂ ಸುಬ್ರಮಣಿಯಬನ್‌ ಸ್ವಾಮಿ ಮತ್ತು ರಾಜು ನಡುವಣ ಪ್ರಕರಣದ ತೀರ್ಪುಗಳನ್ನುಉಲ್ಲೇಖಿಸಿ  ಶಾ ವಾದಿಸಿದ್ದಾರೆ.

ಈ ರೀತಿಯ ಮೂರನೇ ವ್ಯಕ್ತಿಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದರೆ, ಅದು ಇತ್ಯರ್ಥಗೊಂಡ ಕಾನೂನನ್ನು ಅಸ್ಥಿರಗೊಳಿಸುವುದಲ್ಲದೆ, ಕೋಲಾಹಲಕ್ಕೆ ಕಾರಣವಾಗುತ್ತದೆ. ಯಾವುದೇ ನ್ಯಾಯಾಲಯದೆದುರು ಯಾವುದೇ ಕ್ರಿಮಿನಲ್‌ ಪ್ರಕರಣಕ್ಕೆ ಜಿಗಿಯಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎಂದಿದ್ದಾರೆ.

ಪ್ರಕರಣದ ಅರ್ಹತೆ ಮತ್ತು ಗುಜರಾತ್‌ ಸರ್ಕಾರದ ಬಿಡುಗಡೆ ನೀತಿ ಆಧರಿಸಿ ಮೇ 2022ರಲ್ಲಿ ಸುಪ್ರೀಂ ಕೋರ್ಟ್‌ ಸಮಸ್ಯೆಯನ್ನು ಈಗಾಗಲೇ ಇತ್ಯರ್ಥಗೊಳಿಸಿದೆ ಎಂದು ಅರ್ಜಿ ವಿವರಿಸಿದೆ.

ಹಿನ್ನೆಲೆ

2002ರ ಗಲಭೆ ವೇಳೆ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಗುಜರಾತ್‌ನ ದಾಹೋದ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಗುಂಪೊಂದು ಕೊಂದ ಹನ್ನೆರಡು ಜನರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾನೋ ರಾಷ್ಟ್ರೀಯ ಮಾನವ ಹಕ್ಕುಗಳ ಮೊರೆ ಹೋಗಿದ್ದರು. ಬಳಿಕ ಸುಪ್ರೀಂ ಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿತ್ತು.

ಆರೋಪಿಗಳಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಬಾನೋ ದೂರಿದಾಗ 2004 ರಲ್ಲಿ ಪ್ರಕರಣವನ್ನು ಗುಜರಾತ್‌ನ ಗೋದ್ರಾದಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌  ಸೂಚಿಸಿತ್ತು.

ವಿಶೇಷ ಸಿಬಿಐ ನ್ಯಾಯಾಲಯ ಜನವರಿ 2008ರಲ್ಲಿ,  ಹದಿಮೂರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಅದರಲ್ಲಿ ಹನ್ನೊಂದು ಮಂದಿಗೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದೇಶವನ್ನು ಮೇ 2017ರಲ್ಲಿ ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದಿತ್ತು. 2019ರಲ್ಲಿ ಸುಪ್ರೀಂ ಕೋರ್ಟ್ ಕೂಡ ಬಾನೊಗೆ ₹50 ಲಕ್ಷ ಪರಿಹಾರ ನೀಡುವಂತೆ ಗುಜರಾತ್ ರಾಜ್ಯಕ್ಕೆ ನಿರ್ದೇಶನ ನೀಡಿತ್ತು.

ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರಿದ್ದ ಪೀಠವು ಬಾನೊ ಅವರಿಗೆ ಸರ್ಕಾರಿ ಉದ್ಯೋಗ ಮತ್ತು ವಸತಿ ಸೌಕರ್ಯ ಒದಗಿಸುವಂತೆ ಗುಜರಾತ್‌ ಸರ್ಕಾರಕ್ಕೆ ಸೂಚಿಸಿತ್ತು.