ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ
ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ 
ಸುದ್ದಿಗಳು

ಬಿಲ್ಕಿಸ್ ಬಾನೊ ಪ್ರಕರಣದ ತೀರ್ಪು ಮರುಪರಿಶೀಲನೆಗಾಗಿ ಸುಪ್ರೀಂಗೆ ಗುಜರಾತ್‌ ಸರ್ಕಾರ ಅರ್ಜಿ: ಟೀಕೆ ತೆಗೆಯಲು ಮನವಿ

Bar & Bench

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಿದ್ದನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಜನವರಿ 8ರಂದು ನೀಡಿದ ತೀರ್ಪಿನ ವಿರುದ್ಧ ಗುಜರಾತ್ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

ತೀರ್ಪಿನಲ್ಲಿ ಗುಜರಾತ್‌ ಸರ್ಕಾರದ ವಿರುದ್ಧ ಮಾಡಲಾದ ಟೀಕೆಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಗುಜರಾತ್‌ ಸರ್ಕಾರ ಇಂತಹ ಅವಲೋಕನಗಳಿಗೆ ಸಂಬಂಧಿಸಿದಂತೆ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿದೆ.

ಅಪರಾಧಿಗಳೊಂದಿಗೆ ಗುಜರಾತ್‌ ಸರ್ಕಾರ ಶಾಮೀಲಾಗಿ ಕಾರ್ಯ ನಿರ್ವಹಿಸಿತ್ತು  ಎಂಬ ಸುಪ್ರೀಂ ಕೋರ್ಟ್‌ನ ಅವಲೋಕನ ರಾಜ್ಯ ಸರ್ಕಾರದ ಬಗ್ಗೆ ಪೂರ್ವಾಗ್ರಹ ಮೂಡಿಸುತ್ತದೆ ಎಂದು ಮರುಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿ ತಿಳಿಸಿದೆ.

ಅವಲೋಕನ ತೀರಾ ಅನಗತ್ಯವಾಗಿತ್ತು. ಪ್ರಕರಣದ ದಾಖಲೆಗಳಲ್ಲಿರುವ ಮೇಲ್ನೋಟದ ದೋಷಗಳನ್ನು ಗಮನಿಸಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಅನಿವಾರ್ಯವಾಗುತ್ತದೆ. ನ್ಯಾಯಾಲಯ 2022ರ ರಿಟ್ ಅರ್ಜಿ ಸಂಖ್ಯೆ 491ರಲ್ಲಿ 2024ರ ಜನವರಿ 8ರಂದು ಹೊರಡಿಸಿದ ಸಾಮಾನ್ಯ ಅಂತಿಮ ತೀರ್ಪು ಮತ್ತು ಆದೇಶವನ್ನು ಇಲ್ಲಿ ಉಲ್ಲೇಖಿಸಿರುವ ಮಟ್ಟಿಗೆ ಪರಿಶೀಲಿಸಬೇಕು ಎಂದು ಅದು ಕೋರಿದೆ.

ಸುಪ್ರೀಂ ಕೋರ್ಟ್ ಮೇ 2022ರಲ್ಲಿ ನೀಡಿದ ತೀರ್ಪಿನ ಪ್ರಕಾರವೇ ತಾನು ಕಾರ್ಯ ನಿರ್ವಹಿಸಿದ್ದಾಗಿ ಅದು ಉಲ್ಲೇಖಿಸಿದೆ. ಇದಲ್ಲದೆ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿರುವುದರಿಂದ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸಲು ಮಹಾರಾಷ್ಟ್ರ ಸರ್ಕಾರವೇ ಸಮರ್ಥ ಎಂದು ತಾನು ಪದೇ ಪದೇ ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ಸರ್ಕಾರ ಸಮರ್ಥಿಸಿಕೊಂಡಿದೆ.

ಜನವರಿ 8, 2024 ರಂದು, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಗುಜರಾತ್‌ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಪ್ರಕರಣದ ವಿಚಾರಣೆ ಮತ್ತು ಶಿಕ್ಷೆ ವಿಧಿಸುವಿಕೆ ಪ್ರಕ್ರಿಯೆ ಮಹಾರಾಷ್ಟ್ರದಲ್ಲಿ ನಡೆದಿದ್ದರೂ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮನವಿಯನ್ನು ನಿರ್ಧರಿಸಲು ಗುಜರಾತ್‌ ಸಮರ್ಥವಾಗಿದೆ ಎಂದು ಘೋಷಿಸಿದ ಮೇ 2022ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗುಜರಾತ್ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ವಾಸ್ತವಾಂಶಗಳನ್ನು ಮರೆ ಮಾಚುವ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸಿ ಮೇ 2022ರ ತೀರ್ಪು ಪಡೆಯಲಾಗಿದ್ದು ಅಪರಾಧಿಗಳಿಗೆ ಪರಿಹಾರ ನೀಡಲು ಗುಜರಾತ್ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಅಧಿಕಾರ ಕಸಿದುಕೊಂಡಿತ್ತು ಎಂದು ನ್ಯಾ. ನಾಗರತ್ನ ನೇತೃತ್ವದ ಪೀಠ ನುಡಿದಿತ್ತು.