ಗುಜರಾತ್ ಕೋಮುಗಲಭೆ ವೇಳೆ ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಕುಟುಂಬದ ಸದಸ್ಯರನ್ನು ಕೊಂದ ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದ ಗುಜರಾತ್ ಸರ್ಕಾರದ ತೀರ್ಮಾನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಸೋಮವಾರ ಗುಜರಾತ್ ಸರ್ಕಾರ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿಗಳು ಭಾವನಾತ್ಮಕ ಮನವಿಗಳು ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಪ್ರಕರಣವನ್ನು ಕಾನೂನಿನ ಆಧಾರದಲ್ಲಿ ನಿರ್ಧರಿಸುತ್ತೇವೆಯೇ ಹೊರತು ಭಾವನೆಗಳ ಮೇಲಲ್ಲ ಎಂದು ಹೇಳಿತು.
ಬಾನೋ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಘೋರ ಕೃತ್ಯ ಎಸಗಲಾಗಿದೆಯಾದರೂ ವಿಚಾರಣೆ ವೇಳೆ ಪ್ರಕರಣವನ್ನು ಕಾನೂನಿನ ನೆಲೆಯಲ್ಲಿ ತೀರ್ಮಾನಿಸಲಾಗುವುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. ಪ್ರಕರಣಕ್ಕೆ ಸಂಬಂಧಿಸಿದ ಒಂದು ಅರ್ಜಿಯನ್ನು ಖುದ್ದು ಬಾನೊ ಅವರೇ ಸಲ್ಲಿಸಿದ್ದರೆ ಉಳಿದವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸ್ವರೂಪದ್ದವಾಗಿವೆ.
ವಿಚಾರಣೆ ವೇಳೆ ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲೆ ಶೋಭಾ ಗುಪ್ತಾ “ಇಲ್ಲಿ ನ್ಯಾಯಿಕ ವ್ಯಾಪ್ತಿ ಇರುವುದು ಮಹಾರಾಷ್ಟ್ರಕ್ಕೆ ಹೊರತು ಗುಜರಾತ್‌ಗಲ್ಲ. ದಯವಿಟ್ಟು ಸಮಾಜದ ಮೇಲೆ ಕೃತ್ಯದಿಂದಾಗಿರುವ ಪ್ರಭಾವವನ್ನು ಗಮನಿಸಬೇಕು. ಪ್ರಕರಣದಲ್ಲಿ ಅಪರಾಧ ಎಸಗಿದವರಲ್ಲಿ 8 ಮಂದಿ ಅಪ್ರಾಪ್ತ ವಯಸ್ಕರು ಕೂಡ ಇದ್ದರು” ಎಂದರು.
ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ವಕೀಲೆ ವೃಂದಾ ಗ್ರೋವರ್ ವಿಧಿಸಲಾದ ಶಿಕ್ಷೆ ಮೇಲೆ ಪರಿಹಾರ ನೀಡುವಂತಿಲ್ಲ. 14 ಕೊಲೆ ಮತ್ತು 3 ಅತ್ಯಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿದೆ. ರೂ. 34 ಸಾವಿರ ದಂಡ ವಿಧಿಸಲಾಗಿತ್ತು. ದಂಡ ಪಾವತಿಸದಿದ್ದರೆ 34 ವರ್ಷಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹಾಗಿದ್ದರೂ ಹೇಗೆ ಕ್ಷಮಾದಾನ ನೀಡಲಾಯಿತು? ಪೆರೋಲ್ ಮೇಲಿದ್ದಾಗ ಕಿರುಕುಳ ನೀಡಿದ ಆರೋಪವೂ ಅಪರಾಧಿಗಳ ಮೇಲಿದೆ ಎಂದರು.
ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಅಪರಾಧಿಯೊಬ್ಬರ ಪರವಾಗಿ ವಕೀಲ ರಿಷಿ ಮಲ್ಹೋತ್ರಾ, ವಾದ ಮಂಡಿಸಿದರು. ಬಾನೊ ಅವರದ್ದೂ ಸೇರಿದಂತೆ ಎಲ್ಲಾ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 18ರಂದು ವಿಚಾರಣೆ ನಡೆಸಲಿದೆ.