ರಾಜ್ಯಗಳಲ್ಲಿನ ಅಪರಾಧಿಗಳ ಕ್ಷಮಾಪಣೆಗೆ ಸಂಬಂಧಿಸಿದಂತೆ ಅಪರಾಧ ಘಟಿಸಿದ ರಾಜ್ಯದಲ್ಲಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ನೀತಿಯಂತೆ ಅಪರಾಧಿಗಳ ಬಿಡುಗಡೆ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ಮೇ 13ರಂದು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಕೋರಿ ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅಲ್ಲದೆ, 2002ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ತನ್ನ ಕುಟುಂಬ ಸದಸ್ಯರನ್ನು ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೈದ 11 ಅಪರಾಧಿಗಳಿಗೆ ಕ್ಷಮೆ ನೀಡಿರುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಹ ಬಿಲ್ಕಿಸ್ ಬಾನೋ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ವಕೀಲೆ ಶೋಭಾ ಗುಪ್ತಾ ಇಂದು ಮನವಿ ಮಾಡಿದರು. ಪ್ರಕರಣದ ಕುರಿತು ಮೇ 13 ರಂದು ತೀರ್ಪು ನೀಡಿದ್ದ ನ್ಯಾ. ಅಜಯ್ ರಾಸ್ತೋಗಿ ಅವರ ನೇತೃತ್ವದ ಪೀಠದ ಮುಂದೆ ಎರಡೂ ಅರ್ಜಿಗಳನ್ನು ಒಟ್ಟಿಗೆ ಆಲಿಸಬಹುದೇ ಎಂಬುದನ್ನು ಪರಿಶೀಲಿಸುವುದಾಗಿ ಸಿಜೆಐ ಹೇಳಿದರು.
ಮಹಾರಾಷ್ಟ್ರದಲ್ಲಿ ವಿಚಾರಣೆ ನಡೆದಿರುವುದರಿಂದ, ಕೈದಿಗಳ ಬಿಡುಗಡೆಗೆ ಸಂಬಂಧಿಸಿದ 1992ರ ಗುಜರಾತ್ ನೀತಿ ಬದಲಿಗೆ ಮಹಾರಾಷ್ಟ್ರದ ಬಿಡುಗಡೆ ನೀತಿಯನ್ನೇ ಅನ್ವಯಿಸಬೇಕು ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಕೋರಲಾಗಿದೆ.
ಸಿಆರ್‌ಪಿಸಿ ಸೆಕ್ಷನ್ 432 (7) ರ ಅಡಿಯಲ್ಲಿ ಶಿಕ್ಷೆ ಕಡಿತಗೊಳಿಸುವ ಅಧಿಕಾರವು ಸಂಬಂಧಪಟ್ಟ ಸರ್ಕಾರದ ಕೈಯಲ್ಲಿದ್ದು ಅದು ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಿರಬಹುದು. ಆದರೆ ಎರಡು ರಾಜ್ಯ ಸರ್ಕಾರಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಏಕಕಾಲಿಕವಾಗಿ ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ವಿಕ್ರಮ್ ನಾಥ್ ಅವರಿದ್ದ ವಿಭಾಗೀಯ ಪೀಠ ಈ ವರ್ಷದ ಮೇ ತಿಂಗಳಲ್ಲಿ ತೀರ್ಪು ನೀಡಿತ್ತು.
ಗುಜರಾತ್ ಸರ್ಕಾರದ 1992ರ ಅಪರಾಧಿಗಳ ಬಿಡುಗಡೆ ನೀತಿ ಅನ್ವಯವೇ ತನ್ನನ್ನು ಬಿಡುಗಡೆ ಮಾಡುವಂತೆ ಅಪರಾಧಿಗಳಲ್ಲೊಬ್ಬನಾದ ರಾಧೇಶ್ಯಾಮ್ ಭಗವಾಂದಾಸ್ ಶಾ ಅಲಿಯಾಸ್ ಲಾಲಾ ವಕೀಲ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ಪ್ರಕಟಿಸಿತ್ತು.