ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ 
ಸುದ್ದಿಗಳು

ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳು 2 ವಾರದೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್‌ ಆದೇಶ

ಅಪರಾಧಿಗಳೊಂದಿಗೆ ಗುಜರಾತ್‌ ಸರ್ಕಾರ ಶಾಮೀಲಾಗಿ ಕಾರ್ಯ ನಿರ್ವಹಿಸಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ.

Bar & Bench

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹನ್ನೊಂದು ಅಪರಾಧಿಗಳನ್ನು ಇನ್ನೆರಡು ವಾರದಲ್ಲಿ ಮತ್ತೆ ಜೈಲಿಗೆ ಹಾಕುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.

ಈ ಹನ್ನೊಂದು ಅಪರಾಧಿಗಳಿಗೆ ತನ್ನ ಕ್ಷಮಾದಾನ ನೀತಿಯನ್ನು ಅನ್ವಯಿಸುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್

ಬದಲಿಗೆ, ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿರುವುದರಿಂದ ಮಹಾರಾಷ್ಟ್ರ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

ಅಪರಾಧಿಗಳೊಂದಿಗೆ ಗುಜರಾತ್‌ ಸರ್ಕಾರ ಶಾಮೀಲಾಗಿ ಕಾರ್ಯ ನಿರ್ವಹಿಸಿತ್ತು ಎಂದು ಕೂಡ ನ್ಯಾಯಾಲಯ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ ಪ್ರಮುಖ ಅವಲೋಕನಗಳು

  • "ಅಪರಾಧಿಗಳು ಜೈಲಿನಿಂದ ಹೊರಗುಳಿಯಲು ಅನುವು ಮಾಡಿಕೊಡುವುದಕ್ಕಾಗಿ ನಾವು 142 ನೇ ವಿಧಿಯನ್ನು ಬಳಸಲು ಸಾಧ್ಯವಿಲ್ಲ. ಇದರಿಂದ ಅವರು ಅಮಾನ್ಯ ಆದೇಶಗಳ ಫಲಾನುಭವಿಯಾಗುತ್ತಾರೆ.

  • ಪ್ರತಿವಾದಿಗಳ (ಅಪರಾಧಿಗಳ) ಸ್ವಾತಂತ್ರ್ಯ ಕಸಿದುಕೊಳ್ಳುವುದು ನ್ಯಾಯಯುತವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ . ಶಿಕ್ಷೆಗೊಳಗಾಗಿ ಜೈಲಿಗೆ ಹೋದ ನಂತರ ಅವರು ಸ್ವಾತಂತ್ರ್ಯದ ಹಕ್ಕನ್ನು ಕಳೆದುಕೊಂಡಿದ್ದು ಕಾನೂನಿನ ಪ್ರಕಾರ ವಿನಾಯಿತಿ ಪಡೆಯಲು ಬಯಸಿದರೆ ಅವರು ಜೈಲಿನಲ್ಲಿರಬೇಕು.

  • ಹೀಗಾಗಿ ಎಲ್ಲಾ ಪ್ರತಿವಾದಿಗಳು ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳೆದುರು ಶರಣಾಗುವಂತೆ ನಿರ್ದೇಶಿಸಲಾಗಿದೆ.

  • ಪ್ರಕರಣದಲ್ಲಿ ಗುಜರಾತ್ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಅಧಿಕಾರ ಕಸಿದುಕೊಂಡಿದ್ದು ಸರಿಯಲ್ಲ.

  • ಪ್ರಕರಣದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮನವಿಯನ್ನು ನಿರ್ಧರಿಸಲು ಗುಜರಾತ್‌ ಸಮರ್ಥವಾಗಿದೆ ಎಂದು ಘೋಷಿಸಿದ ಮೇ 2022ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗುಜರಾತ್ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು.

  • ವಾಸ್ತವಾಂಶಗಳನ್ನು ಮರೆಮಾಚುವ ಮೂಲಕ ಈ ನ್ಯಾಯಾಲಯವನ್ನು ದಾರಿ ತಪ್ಪಿಸಲಾಗಿದೆ.

  • ಸಿಆರ್‌ಪಿಸಿ 437ರ ಪ್ರಕಾರ ಮಹಾರಾಷ್ಟ್ರವೇ ಸೂಕ್ತ ಸರ್ಕಾರ ಎಂದು ಗುಜರಾತ್ ಈ ಹಿಂದೆ ಸರಿಯಾಗಿ ವಾದಿಸಿತ್ತು... ಆದರೆ ಅದನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದಾಗ ಗುಜರಾತ್ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದಿತ್ತು.

  • ಮೇ 13, 2022 ರ ತೀರ್ಪನ್ನು ತಿದ್ದುಪಡಿ ಮಾಡುವಂತೆ ಕೋರಿ ಗುಜರಾತ್ ಸರ್ಕಾರ ಏಕೆ ಮರುಪರಿಶೀಲನೆ ಸಲ್ಲಿಸಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ.

  • ಮಾನವ ಹಕ್ಕುಗಳ ಮುಖ್ಯ ಗುರಿ ವೈಯಕ್ತಿಕ ಸ್ವಾತಂತ್ರ್ಯ. ಅದನ್ನು ಕಾನೂನಿನ ಪ್ರಕಾರವಷ್ಟೇ ಪಡೆಯಬಹುದು ಆದರೆ ಈ ಪ್ರಕರಣದಲ್ಲಿ ಬಿಡುಗಡೆ ಎಂಬುದು ಅಧಿಕಾರ ಮತ್ತು ನ್ಯಾಯವ್ಯಾಪ್ತಿಯಿಲ್ಲದ ಆದೇಶಗಳಿಂದಾಗಿದೆ.

  • ಕಾನೂನು ಆಳ್ವಿಕೆ ಎಂಬುದು ಅದೃಷ್ಟವಂತರ ರಕ್ಷಣೆಗೆ ಬರುವುದಲ್ಲ. ನ್ಯಾಯಾಂಗ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಅದರ ನಿರ್ಧಾರ ಸಹಾನುಭೂತಿಯನ್ನು ಆಧರಿಸಿರಬಾರದು. ಭಯ, ಅಭೀಪ್ಸೆಗಳಿಲ್ಲದೆ ಅದು ತನ್ನ ಕರ್ತವ್ಯ ನಿರ್ವಹಿಸಬೇಕು.

  • ಅಪರಾಧಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಆದೇಶಿಸುವ ಅಧಿಕಾರ ತನಗೆ ಇದೆ ಎಂದು ಗುಜರಾತ್ ಸರ್ಕಾರ ಭಾವಿಸಿದ್ದು ತಪ್ಪು.