ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ 
ಸುದ್ದಿಗಳು

ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಯಿಂದ ಆಯೋಗದ ಸ್ವಾತಂತ್ರ್ಯ ದುರ್ಬಲ: ನ್ಯಾ. ರೋಹಿಂಟನ್ ನಾರಿಮನ್

ಕಾಯಿದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಆಗ ನ್ಯಾಯಾಲಯ ಅದನ್ನು ರದ್ದುಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Bar & Bench

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ನೇಮಕಾತಿ ಇನ್ನಿತರ ಸೇವಾ ನಿಯಮಗಳನ್ನು ನಿಯಂತ್ರಿಸಲು ರಾಜ್ಯಸಭೆ ಇತ್ತೀಚೆಗೆ ಅಂಗೀಕರಿಸಿದ ಮಸೂದೆಯು ಭಾರತದ ಚುನಾವಣಾ ಆಯೋಗದ (ಇಸಿಐ) ಸ್ವಾತಂತ್ರ್ಯವನ್ನು ಗಂಭೀರ ಅಪಾಯಕ್ಕೆ ದೂಡಬಹುದು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಆತಂಕ ವ್ಯಕ್ತಪಡಿಸಿದರು.

ಮುಂಬೈನ ಏಷ್ಯಾಟಿಕ್‌ ಸೊಸೈಟಿ ತನ್ನ ದರ್ಬಾರ್‌ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ಬನ್ಸಾರಿ ಸೇಠ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಭಾರತದ ಸಂವಿಧಾನ: ತಡೆ ಮತ್ತು ಸಮತೋಲನ" ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಮಸೂದೆಯು ಕಾಯಿದೆಯಾದರೆ, ಸಿಇಸಿ ಮತ್ತು ಇಸಿಗಳನ್ನು ನೇಮಕ ಮಾಡುವಲ್ಲಿ ಕಾರ್ಯಾಂಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.

ನ್ಯಾ. ನಾರಿಮನ್‌ ಅವರ ಭಾಷಣದ ಪ್ರಮುಖಾಂಶಗಳು

  • ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ಈ ರೀತಿ ನೇಮಿಸಲು ಹೊರಟರೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಮರೀಚಿಕೆಯಾಗಲಿವೆ.

  • ಈ ಮಸೂದೆ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ನಿರಂಕುಶ ಕಾನೂನಾಗಿದ್ದು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಆಗ ನ್ಯಾಯಾಲಯ ಅದನ್ನು ರದ್ದುಗೊಳಿಸುತ್ತದೆ ಎಂದು ಪ್ರಾಮಾಣಿಕವಾಗಿ ಭಾವಿಸುವೆ.

  • ಕಾಯಿದೆಯಾಗಲಿರುವ ಮಸೂದೆಯನ್ನು ರದ್ದುಗೊಳಿಸದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಕಾದಿದೆ. ಇದನ್ನು ನಿರಂಕುಶ ಕಾಯಿದೆಯೆಂದು ಪರಿಗಣಿಸಿ ರದ್ದುಗೊಳಿಸಬೇಕು.

  • ಚುನಾವಣಾ ಆಯೋಗವು ಭಾರತೀಯ ಸಂವಿಧಾನದ ಪ್ರಮುಖ ಆಧಾರಸ್ತಂಭವಾಗಿದ್ದು ಅದರ ಸ್ವಾತಂತ್ರ್ಯ ನಿರ್ಣಾಯಕವಾದುದಾಗಿದೆ.

  • ಮಸೂದೆ ಸುಪ್ರೀಂ ಕೋರ್ಟ್ ಸೂಚಿಸಿದ್ದಕ್ಕಿಂತ ಭಿನ್ನವಾಗಿದೆ.

  • ರಾಜ್ಯಸಭೆಯಲ್ಲಿ ಅಂಗೀಕೃತವಾಗಿ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿರುವ ಮಸೂದೆ ವಿಚಲಿತಗೊಳಿಸುವಂತಿದೆ.

ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಯು ನಿರಂಕುಶತೆಯಿಂದ ಕೂಡಿದ್ದು ಮತ್ತು ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ.
ನ್ಯಾ. ರೋಹಿಂಟನ್‌ ನಾರಿಮನ್

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಮಸೂದೆ, 2023 ಅನ್ನು ಡಿಸೆಂಬರ್ 12 ರಂದು ರಾಜ್ಯಸಭೆ ಅಂಗೀಕರಿಸಿತ್ತು.

ಚುನಾವಣಾ ಆಯುಕ್ತರ ನೇಮಕಾತಿಗೆ ಬಂದಾಗ ಕಾನೂನು ನಿರ್ವಾತವನ್ನು ಗಮನಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಪರಿಚಯಿಸಲಾಯಿತು.

ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ನೇಮಕಾತಿಗಳ ಬಗ್ಗೆ ಕೇಂದ್ರ ಸರ್ಕಾರ ಕಾಯಿದೆ ತರುವವರೆಗೆ, ಅಂತಹ ನೇಮಕಾತಿಗಳನ್ನು ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಮಾಡಬೇಕು ಎಂದು ಮಾರ್ಚ್ 2, 2023ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಹೇಳಲಾಗಿತ್ತು. ಆದರೆ, ಪ್ರಸಕ್ತ ಮಸೂದೆಯಲ್ಲಿ ಸಿಜೆಐ ಅವರನ್ನು ಸಮಿತಿಯಿಂದ ಕೈಬಿಡಲಾಗಿದ್ದು ಆ ಸ್ಥಾನದಲ್ಲಿ ಕೇಂದ್ರ ಸಚಿವರನ್ನು ಸೂಚಿಸಲಾಗಿದೆ.

[ ಪೂರ್ಣ ಉಪನ್ಯಾಸದ ದೃಶ್ಯಾವಳಿಗಳನ್ನು ವೀಕ್ಷಿಸಲು ಕೆಳಗೆ ಕ್ಲಿಕ್ಕಿಸಿ]