Bitcoin
Bitcoin Representative Image
ಸುದ್ದಿಗಳು

ಬಿಟ್‌ಕಾಯಿನ್‌ ಪ್ರಕರಣ: ಲುಕ್ ಔಟ್ ಸುತ್ತೋಲೆ ಕುರಿತಾದ ಮೂಲ ದಾಖಲೆ ಸಲ್ಲಿಸಲು ಕೇಂದ್ರಕ್ಕೆ ಹೈಕೋರ್ಟ್‌ ನಿರ್ದೇಶನ

Bar & Bench

ಬಿಟ್‌ಕಾಯಿನ್ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಸಹೋದರ ಸುದರ್ಶನ್ ರಮೇಶ್ ವಿರುದ್ಧ ಹೊರಡಿಸಲಾಗಿರುವ ಲುಕ್ ಔಟ್ ಸುತ್ತೋಲೆಗೆ (ಎಲ್‌ಒಸಿ) ಸಂಬಂಧಿಸಿದ ಮೂಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ನೆದರ್‌ಲ್ಯಾಂಡ್‌ನ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಸುದರ್ಶನ್ ರಮೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು ಲುಕ್ ಔಟ್ ಸರ್ಕ್ಯೂಲರ್ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇದರಿಂದ, ವಾದ ಮಂಡನೆಗೆ ಕಷ್ಟವಾಗುತ್ತಿದೆ ಎಂದು ತಿಳಿಸಿದರು. ಜತೆಗೆ, ಅರ್ಜಿದಾರರು ಫೆಬ್ರವರಿ 12ರೊಳಗೆ ಕೆಲಸಕ್ಕೆ ಹಾಜರಾಗದಿದ್ದರೆ, ಉದ್ಯೋಗದಲ್ಲಿ ಮುಂದುವರಿಸಲಾಗುವುದಿಲ್ಲ ಎಂದು ಉದ್ಯೋಗದಾತ ಸಂಸ್ಥೆ ಹೇಳಿದೆ. ಸರಿಯಾದ ಸಮಯಕ್ಕೆ ನೆದರ್‌ಲ್ಯಾಂಡ್‌ಗೆ ತೆರಳದಿದ್ದರೆ ಅರ್ಜಿದಾರರು ಉದ್ಯೋಗವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಪರ ವಕೀಲರು, ಎಲ್‌ಒಸಿ ಗೌಪ್ಯ ದಾಖಲೆಯಾಗಿದ್ದು, ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.

ಅದಕ್ಕೆ ಪೀಠವು ಅರ್ಜಿದಾರರ ಪರ ವಕೀಲರಿಗೆ ಎಲ್‌ಒಸಿ ಮಾಹಿತಿಯೇ ಇಲ್ಲವಾದರೆ ಅದನ್ನು ಪ್ರಶ್ನಿಸುವುದು ಹೇಗೆ, ವಾದ ಮಂಡಿಸುವುದಾದರೂ ಹೇಗೆ ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತಲ್ಲದೆ, ಅರ್ಜಿಯ ಮುಂದಿನ ವಿಚಾರಣೆ ವೇಳೆ ಎಲ್‌ಒಸಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು. ಅಲ್ಲದೆ, ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಅರ್ಜಿದಾರರನ್ನು ಕೆಲಸದಿಂದ ತೆರವುಗೊಳಿಸದಂತೆ ಉದ್ಯೋಗದಾತ ಸಂಸ್ಥೆಗೆ ಮನವಿ ಮಾಡುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಮೌಖಿಕವಾಗಿ ಸಲಹೆ ನೀಡಿತು.