<div class="paragraphs"><p>Karnataka HC, Justice H P Sandesh, Bitcoin</p></div>

Karnataka HC, Justice H P Sandesh, Bitcoin

 
ಸುದ್ದಿಗಳು

ಬಿಟ್‌ಕಾಯಿನ್‌ ಪ್ರಕರಣ: ₹75 ಲಕ್ಷ ವಂಚನೆ ಆರೋಪ; ಆರೋಪಿಯ ಜಾಮೀನು ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್‌

Bar & Bench

ಬಿಟ್ ಕಾಯಿನ್ ಖರೀದಿಗೆ ಸಂಬಂಧಿಸಿಂತೆ ಬೆಂಗಳೂರಿನ ನಿವಾಸಿಯೊಬ್ಬರಿಗೆ 75 ಲಕ್ಷ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಹಾರ ಮೂಲದ ಶಂತನು ಸಿನ್ಹಾಗೆ ಜಾಮೀನು ನೀಡಿದ್ದ ಅಧೀನ ನ್ಯಾಯಾಲಯ ಆದೇಶ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ಬೆಂಗಳೂರಿನ ನಾಗಸಂದ್ರ ನಿವಾಸಿ ಟಿ ವೆಂಕಟೇಶ್ ಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕ ಸದಸ್ಯ ಪೀಠವು ಮೇಲಿನ ಆದೇಶ ಮಾಡಿದೆ.

ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಇದೇ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜಾಮೀನು ದೊರೆತಿದೆ. ಆರೋಪಿ ವಿರುದ್ಧ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪಗಳಿಲ್ಲ. ಇದರಿಂದ ನ್ಯಾಯಾಂಗ ಬಂಧನದಲ್ಲಿರುವ ಅಗತ್ಯ ಕಂಡು ಬರುತ್ತಿಲ್ಲ. ಜತೆಗೆ, ಪೂರ್ವಾನುಮತಿ ಪಡೆಯದೆ ರಾಜ್ಯ ಬಿಟ್ಟು ತೆರಳುವಂತಿಲ್ಲ. 60 ದಿನದವರೆಗೆ ಅಥವಾ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವವರೆಗೂ 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಇದೇ ಮಾದರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಜಾಮೀನು ನೀಡುವಾಗ ಅಧೀನ ನ್ಯಾಯಾಲಯವು ಷರತ್ತು ವಿಧಿಸಿದೆ. ಇಂತಹ ಸಂದರ್ಭದಲ್ಲಿ ಜಾಮೀನು ಮಂಜೂರಾತಿ ಆದೇಶ ರದ್ದುಪಡಿಸುವ ಅಗತ್ಯ ಕಾಣುತ್ತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಬಿಟ್ ಕಾಯಿನ್ ಖರೀದಿಗಾಗಿ ವೆಂಕಟೇಶ್‌ ಮೂರ್ತಿ ಅವರಿಂದ 75 ಲಕ್ಷ ರೂಪಾಯಿ ಪಡೆದು ಹಿಂದಿರುಗಿಸದೆ ಶಂತನು ಸಿನ್ಹಾ ವಂಚನೆ ಮಾಡಿದ್ದಾರೆ. ಮಾಸಿಕ ಭಾರಿ ಆದಾಯ ಬರುವುದಾಗಿ ಆಮಿಷವೊಡ್ಡಿ ಸಾಕಷ್ಟು ಜನರಿಗೆ ವಂಚಿಸಿದ್ದಾರೆ. ಸುಮಾರು 2,500ಕ್ಕೂ ಹೆಚ್ಚು ಮಂದಿ ಬಿಟ್‌ಕಾಯಿನ್ ವಹಿವಾಟಿನಲ್ಲಿ ಹಣ ಹೂಡಿಕೆ ಮಾಡಿದ್ದು, ಸುಮಾರು 1,500 ಕೋಟಿ ರೂಪಾಯಿ ವಂಚನೆಯಾಗಿದೆ. ದೇಶದಲ್ಲಿ ಇಂದೊಂದು ದೊಡ್ಡ ಅರ್ಥಿಕ ಅಪರಾಧವಾಗಿದೆ. ಈ ಪ್ರಕರಣದಲ್ಲಿ ಶಂತನು ಸಿನ್ಹಾ ಸಂಬಂಧ ಹೊಂದಿದ್ದಾರೆ ಎಂದು ವೆಂಕಟೇಶ್ ಮೂರ್ತಿ ದೂರು ಸಲ್ಲಿಸಿದ್ದರು.

ಸಿಐಡಿಯ ಸೈಬರ್ ಕೈಂ ಠಾಣಾ ಪೊಲೀಸರು ಬಿಹಾರದ ಪಾಟ್ನಾ ಮೂಲ ಶಂತನು ಸಿನ್ಹಾ ಅವರನ್ನು ಬಂಧಿಸಿದ್ದರು. ನೆಲಮಂಗಲದ 1ನೇ ಹೆಚ್ಚವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿ 2021ರ ಮೇ 5ರಂದು ಆದೇಶಿಸಿತ್ತು. ಆ ಆದೇಶ ರದ್ದುಪಡಿಸಬೇಕು ಎಂದು ಕೋರಿ ದೂರುದಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

T Venkatesh Murthy versus State of Karnataka.pdf
Preview